ನವದೆಹಲಿ, ಮೇ.10 (DaijiworldNews/PY): ಕೊರೊನಾದಿಂದ ಅನಾಥವಾಗುತ್ತಿರುವ ಮಕ್ಕಳನ್ನು ಕಾನೂನು ಪ್ರಕಾರ ದತ್ತು ಪಡೆಯುವವರೆಗೂ, ಆ ಮಕ್ಕಳನ್ನು ಕಳ್ಳಸಾಗಣೆಯಿಂದ ರಕ್ಷಿಸಬೇಕು ಎಂದು ಕೋರಿ ದೆಹಲಿ ಹೈಕೋಟ್ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸುವಂತೆ ದೆಹಲಿ ಹಾಗೂ ಕೇಂದ್ರ ಸರ್ಕಾರಕ್ಕೆ ಸೋಮವಾರ ನೋಟಿಸ್ ನೀಡಲಾಗಿದೆ.
ಅರ್ಜಿಗೆ ಸಂಬಂಧಿಸಿದಂತೆ, ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರನ್ನೊಗೊಂಡ ನ್ಯಾಯಪೀಠವು, ಕೇಂದ್ರ ಗೃಹ ಸಚಿವಾಲಯ ಸೇರಿದಂತೆ ಮಹಿಳಾ ಹಾಗೂ ಮಕ್ಕಳ ಅಭಿವೃದ್ದಿ ಹಾಗೂ ಆರೋಗ್ಯ ಸಚಿವಾಲಯ, ದೆಹಲಿ ಸರ್ಕಾರ ಹಾಗೂ ನಗರ ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ.
ವಕೀಲ ಜಿತೇಂದ್ರ ಗುಪ್ತಾ ಹಾಗೂ ಆನಂದ್ ಈ ಎರಡು ಸಾರ್ವಜನಿಕ ಹಿತಾದಕ್ತಿ ಅರ್ಜಿಗಳನ್ನು ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದಾರೆ.
ಕೊರೊನಾ ಬಿಕ್ಕಟ್ಟಿನಲ್ಲಿ ಅನಾಥವಾಗುತ್ತಿರುವ ಮಕ್ಕಳಿಗೆ ಅವರ ಹತ್ತಿರ ಸಂಬಂಧಿಕರಿಂದ ಅಥವಾ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ರಕ್ಷಣೆ ನೀಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇನ್ನೊಂದು ಅರ್ಜಿಯಲ್ಲಿ, ಆಕ್ಸಿಜನ್ ಹಾಗೂ ಔಷಧ ಸಮಸ್ಯೆ, ಹಣಕಾಸು ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಿದ ಕಾರಣಗಳಿಂದ ಬಲಿಯಾದ ಮೃತರ ಕುಟುಂಬಕ್ಕೆ ಯಾವ ರೀತಿಯಾದ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸುವಂತೆ ಮನವಿ ಮಾಡಲಾಗಿದೆ.