ನವದೆಹಲಿ, ಮೇ 10 (DaijiworldNews/MS): ಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ ‘ಕೋವಾಕ್ಸಿನ್’ ಅನ್ನು ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಿಗೆ ಮೇ 1 ರಿಂದ ನೇರವಾಗಿ ಸರಬರಾಜು ಮಾಡಲು ಪ್ರಾರಂಭಿಸಿದೆ ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುಚಿತ್ರಾ ಎಲಾ ಹೇಳಿದ್ದಾರೆ.
ಆದರೆ ವಿಶೇಷವೆಂದರೆ ದೇಶದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಹೆಸರು ಈ 14 ರಾಜ್ಯಗಳ ಪಟ್ಟಿಯಲ್ಲಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದೆ ಸುಮಲತಾ ಅಂಬರೀಶ್ " ಅತ್ಯಂತ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿರುವ ಕರ್ನಾಟಕ ಈ ಪಟ್ಟಿಯಲ್ಲಿ ಇಲ್ಲದಿರುವುದು ದಿಗ್ಭ್ರಮೆ ಮೂಡಿಸಿದೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ, ಹರ್ಷವರ್ಧನ್ ಅವರಲ್ಲಿ ನಮ್ಮ ರಾಜ್ಯದ ಲಸಿಕಾ ಕಾರ್ಯಕ್ಕೆ ಈ ಕೂಡಲೇ ಆದ್ಯತೆ ಕೊಟ್ಟು ಉದ್ದೇಶಿಸಬೇಕೆಂದು ಆಗ್ರಹ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಹೈದರಾಬಾದ್ ಮೂಲದ ಸಂಸ್ಥೆಯು ಕೇಂದ್ರ ಸರ್ಕಾರವು ಪಡೆದ ಹಂಚಿಕೆಯ ಆಧಾರದ ಮೇಲೆ ತನ್ನ ಕೋವಿಡ್ -19 ಚಿಕಿತ್ಸಾ ಲಸಿಕೆಯನ್ನು ರಾಜ್ಯಗಳಿಗೆ ಪೂರೈಸಲು ಪ್ರಾರಂಭಿಸಿದೆ.' ಭಾರತ್ ಬಯೋಟೆಕ್ ಗೋಯಿ ಸ್ವೀಕರಿಸಿದ ಹಂಚಿಕೆಗಳ ಆಧಾರದ ಮೇಲೆ 1/5/21 ರಿಂದ ಈ ಕೆಳಗಿನ ರಾಜ್ಯ ಸರ್ಕಾರಗಳಿಗೆ ಕೋವಾಕ್ಸಿನ್ ನೇರ ಸರಬರಾಜನ್ನು ದೃಢ ಪಡಿಸುತ್ತದೆ. ಇತರ ರಾಜ್ಯಗಳಿಂದ ಕೋರಿಕೆಯನ್ನು ಸ್ವೀಕರಿಸಲಾಗಿದ್ದು, ದಿನ ಪೂರ್ತಿ ಇರುವ ದಾಸ್ತಾನಿನ ಲಭ್ಯತೆಯ ಆಧಾರದ ಮೇಲೆ ವಿತರಣೆಗೆ ಪ್ರಕ್ರಿಯೆಗೊಳಿಸಲಾಗುವುದು,' ಎಂದು ಟ್ವೀಟ್ ಮಾಡಿದ್ದಾರೆ.
ಕಂಪನಿಯು ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್ ಗಢ್ , ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಲಸಿಕೆಗಳನ್ನು ನೇರವಾಗಿ ಪೂರೈಸುತ್ತಿದೆ.