ನವದೆಹಲಿ, ಮೇ 10 (DaijiworldNews/MB) : ದೆಹಲಿ ಗಲಭೆಯಲ್ಲಿ ಪಿತೂರಿ ಮಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟ ಪಿಂಜ್ರಾ ಟಾಡ್ ಕಾರ್ಯಕರ್ತೆ ನತಾಶಾ ನರ್ವಾಲ್ ಅವರ ತಂದೆ ವಿಜ್ಞಾನಿ ಹಾಗೂ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಮಹಾವೀರ್ ನರ್ವಾಲ್ ಅವರು ನಿಧನರಾದ ಹಿನ್ನೆಲೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಹೈಕೋರ್ಟ್ ನತಾಶಾ ನರ್ವಾಲ್ ಅವರಿಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.
ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ನತಾಶಾ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
ಕೊರೊನಾ ಸೋಂಕಿಗೆ ಒಳಪಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ತಂದೆ ಮಹಾವೀರ್ ನರ್ವಾಲ್ ರವಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು ಈ ಹಿನ್ನೆಲೆ ದೆಹಲಿ ಹೈಕೋರ್ಟ್ ಪಿಂಜ್ರಾ ಟೋಡ್ ಕಾರ್ಯಕರ್ತೆ ನತಾಶಾ ನರ್ವಾಲ್ ಅವರಿಗೆ 50,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಮೂರು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಇನ್ನು ಮಹಾವೀರ್ ನರ್ವಾಲ್ ಅವರ ಪುತ್ರ ಆಕಾಶ್ ನವಾರ್ಲ್ ಅವರಿಗೂ ಕೊರೊನಾ ದೃಢಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.