ಮುಂಬೈ, ಮೇ.10 (DaijiworldNews/PY): ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಇತ್ತೀಚೆಗೆ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಲಾಗಿತ್ತು. ಇದೀಗ ಇನ್ಸ್ಸ್ಟಾಗ್ರಾಂನಲ್ಲೂ ಕಂಗನಾ ಅವರ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.
ಕಂಗನಾ ರಣಾವತ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದರು. ಪೋಸ್ಟ್ನಲ್ಲಿ ಕೊರೊನಾ ಒಂದು ಸ್ಮಾಲ್ ಟೈಮ್ ಫ್ಲೂ ಎಂದು ಉಲ್ಲೇಖಿಸಿದ್ದರು. ಕೊರೊನಾ ಬಗ್ಗೆ ತಪ್ಪು ಮಾಹಿತಿ ಹರಡಿದ ಕಾರಣಕ್ಕೆ ಇನ್ಸ್ಸ್ಟಾಗ್ರಾಂ ಕಂಗನಾ ಅವರ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.
ಇನ್ಸ್ಸ್ಟಾಗ್ರಾಂ ಪೋಸ್ಟ್ನಲ್ಲಿ, "ಕೊರೊನಾ ದೃಢಪಟ್ಟ ಬಳಿಕ ನನಗೆ ಸುಸ್ತಾಗುತ್ತಿದ್ದು, ಕಣ್ಣುಗಳು ಉರಿಯುತ್ತಿತ್ತು. ನಾನು ಹಿಮಾಚಲಕ್ಕೆ ಹೋಗಬೇಕೆಂದುಕೊಂಡಿದ್ದೆ. ಹಾಗಾಗಿ ಪರೀಕ್ಷೆ ಮಾಡಿಸಿದ್ದು, ಈ ವೇಳೆ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಈಗ ನಾನು ಕ್ವಾರಂಟೈನ್ ಆಗಿದ್ದೇನೆ. ಈ ವೈರಸ್ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಈ ವೈರಸ್ ಅನ್ನು ನಾಶ ಮಾಡುತ್ತೇನೆ ಎಂದು ನನಗೆ ತಿಳಿದಿದೆ. ಕೊರೊನಾ ಸೋಂಕಿನ ಬಗ್ಗೆ ಜನರು ಬಯಪಡಬೇಡಿ. ನೀವು ಭಯಪಟ್ಟಲ್ಲಿ ಅದು ನಿಮ್ಮನ್ನು ಹೆಚ್ಚು ಭಯಪಡಿಸುತ್ತದೆ. ಬನ್ನಿ ಕೊರೊನಾ ಸೋಂಕನ್ನು ನಾಶ ಮಾಡೋಣ. ಈ ಸೋಂಕು ಸ್ಮಾಲ್ ಟೈಮ್ ಫ್ಲೂ" ಎಂದು ಬರೆದುಕೊಂಡಿದ್ದರು. ಕಂಗನಾ ಅವರ ಈ ಪೋಸ್ಟ್ ಅನ್ನು ಇನ್ಸ್ಸ್ಟಾಗ್ರಾಂ ಡಿಲೀಟ್ ಮಾಡಿದೆ.
ಪೋಸ್ಟ್ ಡಿಲೀಟ್ ಬಳಿಕ ಇನ್ಸ್ಸ್ಟಾಗ್ರಾಂನಲ್ಲಿ ಬರೆದುಕೊಂಡ ಅವರು, "ನನ್ನ ಪೋಸ್ಟ್ ಅನ್ನು ಇನ್ಸ್ಸ್ಟಗ್ರಾಂ ಡಿಲೀಟ್ ಮಾಡಿದೆ. ಕೊರೊನಾ ಸೋಂಕನ್ನು ನಾನು ನಾಶ ಮಾಡುತ್ತೇನೆ ಎಂದು ಹೇಳಿರುವುದು ಕೆಲವರಿಗೆ ನೋವುಂಟು ಮಾಡಿರಬಹುದು. ಭಯೋತ್ಪಾದಕರು ಹಾಗೂ ಕಮ್ಯೂನಿಸ್ಟ್ಗಳು ಟ್ವಿಟ್ಟರ್ನಲ್ಲಿದ್ದರೆ, ಇನ್ಸ್ಸ್ಟಾಗ್ರಾಂನಲ್ಲಿ ಕೊರೊನಾ ಫ್ಯಾನ್ ಕ್ಲಬ್ ಇದೆ. ನಾನು ಇನ್ಸ್ಸ್ಟಾಗ್ರಾಂಗೆ ಬಂದು ಎರಡು ದಿನಗಳು ಕಳೆದವು. ಇಲ್ಲಿ ನಾನು ಒಂದು ವಾರಕ್ಕಿಂತ ಹೆಚ್ಚು ಕಾಲ ಇರುವುದಿಲ್ಲ ಎಂದು ನನಗೆ ಅನಿಸುತ್ತಿದೆ" ಎಂದಿದ್ದಾರೆ.