ಬೆಂಗಳೂರು, ಮೇ 10 (DaijiworldNews/MB) : ''ಬಿಜೆಪಿ ಹೈಕಮಾಂಡ್ ರಾಜ್ಯದ ಬಗ್ಗೆ ಯಾವುದೇ ಬೇಸರ ವ್ಯಕ್ತಪಡಿಸಿಲ್ಲ. ಹೈಕಮಾಂಡ್ ರಾಜ್ಯದ ಬಗ್ಗೆ ಬೇಸರಗೊಂಡಿದೆ ಎಂಬ ಸುದ್ದಿ ಸುಳ್ಳು'' ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಚಿವ ಬಸವರಾಜ ಬೊಮ್ಮಾಯಿ ಮತ್ತು ಬಿ.ವೈ.ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ ರಾಜ್ಯದ ಬಿಜೆಪಿ ಸರ್ಕಾರದ ಬಗ್ಗೆ ಬಿಜೆಪಿ ಹೈಕಮಾಂಡ್ ಬೇಸರಗೊಂಡಿದೆ ಎಂದು ಸುದ್ದಿಯಾಗಿತ್ತು.
ಈ ಬಗ್ಗೆ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ನಾವು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಕೊರೊನಾ ಸಂದರ್ಭದಲ್ಲಿ ನಾವು ರಾಜ್ಯದ ಕೊರೊನಾ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಅವರು ರಾಜ್ಯದ ಕೊರೊನಾ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಬೇರೆ ಯಾವುದೇ ಚರ್ಚೆ ನಡೆದಿಲ್ಲ. ಈ ಕೊರೊನಾ ಸಂದರ್ಭದಲ್ಲಿ ಆ ರೀತಿ ಯೋಚನೆ ಸರಿಯಲ್ಲ'' ಎಂದು ಹೇಳಿದರು.
ಇನ್ನು ಈ ವೇಳೆಯೇ ನಾವು ರಾಜ್ಯದ ಆಕ್ಸಿಜನ್ ಕೋಟಾ ಹೆಚ್ಚಳಕ್ಕೆ ಆಗ್ರಹಿಸಿದ್ದೇವೆ, ಅದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು, ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯದ ಕೋಟಾ ಎಷ್ಟು ಸಾಧ್ಯವಿದೆಯೋ ಅಷ್ಟು ಮಾಡುತ್ತೇವೆ ಎಂದು ತಿಳಿಸಿರುವುದುದಾಗಿ ಬೊಮ್ಮಾಯಿ ಹೇಳಿದ್ದಾರೆ.
ಹಾಗೆಯೇ ಕೇಂದ್ರ ಸರ್ಕಾರ ನಿನ್ನೆ ನಾಲ್ಕು ಟ್ಯಾಂಕರ್ ಆಕ್ಸಿಜನ್ ರಾಜ್ಯಕ್ಕೆ ಮಂಜೂರು ಮಾಡಿದೆ. ಇನ್ನೂ 10 ಟ್ಯಾಂಕರ್ ನೀಡಲು ಕೊಂಚ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.