ನವದೆಹಲಿ, ಮೇ.10 (DaijiworldNews/PY): "ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ನಾವು ತೀವ್ರ ನಿರಾಶೆಗೊಂಡಿದ್ದು, ಪಕ್ಷವನ್ನು ಕ್ರಮಬದ್ದಗೊಳಿಸುವುದು ಅವಶ್ಯಕ" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, "ಪ್ರತಿಯೊಂದು ಅಂಶಗಳತ್ತ ಗಮನಹರಿಸಲು ಹಾಗೂ ಶೀಘ್ರವೇ ವರದಿ ಸಲ್ಲಿಸಲು ಒಂದು ತಂಡವನ್ನು ನಿಯೋಜನೆ ಮಾಡಲು ಬಯಸಿದ್ದೇವೆ. ಕೇರಳ ಹಾಗೂ ಅಸ್ಸಾಂನಲ್ಲಿ ನಾವು ಏಕೆ ವಿಫಲರಾಗಿದ್ದೇವೆ. ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ನ ಕಳಪೆ ಸಾಧನೆ ತೀರಾ ಬೇಸರ ತಂದಿದೆ. ಇಂತಹ ಅಹಿತರ ಘಟನೆಗಳು ನಮಗೆ ಪಾಠ ಕಲಿಸುತ್ತವೆ. ನಾವು ವಾಸ್ತವದತ್ತ ಗಮನಹರಿಸಬೇಕು" ಎಂದಿದ್ದಾರೆ.
ಈ ವೇಳೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, "ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೊನಾ ನಿಯಂತ್ರಿಸುವಲ್ಲಿ ಆಡಳಿತ ಸಂಪೂರ್ಣ ವೈಫಲ್ಯವಾಗಿದೆ. ವೈಜ್ಞಾನಿಕ ಸಲಹೆಗಳನ್ನು ಪ್ರಧಾನಿ ಮೋದಿ ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೊರೊನಾದ ಎರಡನೇ ಅಲೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ದೇಶ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆ" ಎಂದು ಆರೋಪಿಸಿದ್ದಾರೆ.