ಅಸ್ಸಾಂ, ಮೇ 10 (DaijiworldNews/MB) : ಅಸ್ಸಾಂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಿಮಂತ್ ಬಿಸ್ವಾ ಶರ್ಮಾ ಇಂದು ನಡೆದ ಸರಳ ಸಮಾರಂಭದಲ್ಲಿ, (ಮೇ.10) ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಜಗದೀಶ್ ಮುಖಿ ಪ್ರಮಾಣ ವಚನ ಬೋಧಿಸಿದ್ದು ಈ ಈ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ತ್ರಿಪುರ ಸಿಎಂ ಬಿಪ್ಲಾಬ್ ದೇಬ್, ಮೇಘಾಲಯ ಸಿಎಂ ಕಾನ್ರಾಡ್ ಸಾಂಗ್ಮಾ, ಮಣಿಪುರದ ಸಿಎಂ ಎನ್ .ಬಿರೆನ್ ಸಿಂಗ್, ಮತ್ತು ನಾಗಾಲ್ಯಾಂಡ್ ಸಿಎಂ ನೀಫಿಯು ರಿಯೊ ಹಾಜರಿದ್ದರು.
ಹಾಗೆಯೇ ಸಮಾರಂಭದಲ್ಲಿ ನಿರ್ಗಮಿತ ಸಿಎಂ ಸರ್ಬಾನಂದ ಸೋನೊವಾಲ್ ಕೂಡ ಉಪಸ್ಥಿತರಿದ್ದರು.
126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 60ರಲ್ಲಿ ಗೆಲುವು ಗಳಿಸಿತ್ತು. ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಎಜಿಪಿ 9, ಯುಪಿಪಿಎಲ್ 6ರಲ್ಲಿ ಜಯ ಸಾಧಿಸಿತ್ತು.
ಮೇ 9ರ ರವಿವಾರ ಗುವಾಹಟಿಯಲ್ಲಿ ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಅವಿರೋಧವಾಗಿ ಅಸ್ಸಾಂ ರಾಜ್ಯದ ಸಿಎಂ ಆಗಿ ಆಯ್ಕೆ ಮಾಡಿ ಘೋಷಣೆ ಮಾಡಿತ್ತು.