ದೆಹಲಿ, ಮೇ 10 (DaijiworldNews/MS): ಭಾನುವಾರ ಸಾವನ್ನಪ್ಪುವ ಮುಂಚೆ , "ಉತ್ತಮ ಚಿಕಿತ್ಸೆ ದೊರೆತಿದ್ದರೆ ಬದುಕುಳಿಯುತ್ತಿದ್ದೆ " ಎಂದು ಟ್ವೀಟ್ ಮಾಡಿದ್ದ ನಟ ಹಾಗೂ ಯುಟ್ಯೂಬರ್ ರಾಹುಲ್ ವೊಹ್ರಾ ಅವರ ಪತ್ನಿ ಜ್ಯೋತಿ ತಿವಾರಿ ವೈದ್ಯಕೀಯ ನಿರ್ಲಕ್ಷ್ಯವನ್ನು ದೂಷಿಸಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಪತಿಯ ಸಾವಿಗೆ ನ್ಯಾಯ ಕೇಳಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ರಾಹುಲ್, ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾವಿಗೂ ಒಂದು ದಿನದ ಮುಂಚೆ ಅಂದರೆ ಮೇ.8 ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, ನನಗೂ ಉತ್ತಮ ಚಿಕಿತ್ಸೆ ಸಿಕ್ಕಿದ್ದಿದ್ದರೆ ನಾನೂ ಬದುಕುಳಿಯಬಹುದಿತ್ತು ಎಂದು ಬರೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಯ ಡಿಸಿಎಂ ಮನಿಶ್ ಸಿಸೋಡಿಯಾ ಅವರ ಹೆಸರುಗಳನ್ನು ಉಲ್ಲೇಖಿಸಿ, 'ಬಹಳ ಬೇಗನೇ ಮತ್ತೆ ಹುಟ್ಟಿ ಬರುತ್ತೇನೆ. ಒಳ್ಳೆ ಕೆಲಸ ಮಾಡುತ್ತೇನೆ' . ಈಗ ಧೈರ್ಯ ಕಳೆದುಕೊಂಡಿದ್ದೇನೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.
ಇದೀಗ ಅವರ ಪತ್ನಿ ರಾಹುಲ್ ಅವರ ಪೋಸ್ಟ್ ನಲ್ಲಿ , "ನನ್ನ ರಾಹುಲ್ ನಮ್ಮನ್ನು ತೊರೆದರು ಎಂಬುದು ಎಲ್ಲರಿಗೂ ತಿಳಿದಿದೆ ಆದರೆ ಅವರು ಹೇಗೆ ಮೃತರಾದರೂ ಎಂದು ಯಾರಿಗೂ ತಿಳಿದಿಲ್ಲ. ಇದು ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರಿಗೆ ದೊರೆತ ಚಿಕಿತ್ಸೆಯಾಗಿದೆ. ನನ್ನ ಪತಿಗೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಇನ್ನೊಬ್ಬ ರಾಹುಲ್ ಈ ರೀತಿ ಸಾಯಬಾರದು ಎಂದು ಅವರ ಪತಿ ಮಾಡಿದ ಕೊನೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ, ರಾಹುಲ್ ಅವರು ಹೇಳಿದಂತೆ ಅವರು ಆಮ್ಲಜನಕದ ಸಹಾಯದೊಂದಿಗೆ ಇದ್ದು " ಇದು ಇಂದಿನ ಕಾಲದಲ್ಲಿ ಬಹಳ ಮೌಲ್ಯಯುತವಾಗಿದೆ. ಇದಿಲ್ಲದೆ, ರೋಗಿಗಳು ಬಳಲುತ್ತಿದ್ದಾರೆ. ಆದರೆ ಇದರ ಮೂಲಕ ಏನೂ ಬರುತ್ತಿಲ್ಲ, ಏನೂ ಇಲ್ಲ, ಏನಾದರೂ ಸಹಾಯಕ್ಕಾಗಿ ಅಟೆಂಡೆಂಟ್ ಅನ್ನು ಕರೆದಾಗ ಒಂದೇ ನಿಮಿಷದಲ್ಲಿ ಹಿಂತಿರುಗಿ ನಂತರ ಕಣ್ಮರೆಯಾಗುತ್ತಾರೆ " ಎಂದು ಹೇಳಿದ್ದಾರೆ.