ಬೆಂಗಳೂರು, ಮೇ 10 (DaijiworldNews/MB) : ಇಂದಿನಿಂದ ರಾಜ್ಯದಾದ್ಯಂತ 14 ದಿನಗಳ ಕೊರೊನಾ ಲಾಕ್ಡೌನ್ ಜಾರಿಯಾಗಲಿದೆ. ಈ ಹಿನ್ನೆಲೆ ಸಾರ್ವಜನಿಕರು ಸೋಂಕು ನಿಯಂತ್ರಿಸಲು ಸಹಕರಿಸಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕೋವಿಡ್ ಸೋಂಕಿನ ಸರಪಳಿಯನ್ನು ಮುರಿಯಲು ಇಂದಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ವಿಧಿಸಲಾಗಿದೆ. ಎಲ್ಲಾ ಸಂಸದರು ಮತ್ತು ಶಾಸಕರು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಉಳಿದು, ಉದ್ದೇಶ ಈಡೇರುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ನಿಯಮಗಳು ಜಾರಿಯಾಗುವುದನ್ನು ಖಚಿತಪಡಿಸಬೇಕು ಮನವಿ ಮಾಡುತ್ತೇನೆ'' ಎಂದು ಹೇಳಿದ್ದಾರೆ.
''ಎಲ್ಲರ ಸಕ್ರಿಯ ಸಹಕಾರವಿಲ್ಲದೆ ಇದು ಯಶಸ್ವಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಏನೇ ಅಡೆತಡೆ, ಸಮಸ್ಯೆಗಳಿದ್ದರೆ, ದಯವಿಟ್ಟು ಅದನ್ನು ಜಿಲ್ಲಾಧಿಕಾರಿಗಳ, ಜಿಲ್ಲಾ ಉಸ್ತುವಾರಿ ಸಚಿವರ ಅಥವಾ ನೇರವಾಗಿ ನನ್ನ ಗಮನಕ್ಕೆ ತನ್ನಿ. ಒಟ್ಟಾಗಿ ನಾವು ಕೊರೋನಾವನ್ನು ಸೋಲಿಸೋಣ. ಸಾರ್ವಜನಿಕರು ಕೂಡ ಸೋಂಕು ನಿಯಂತ್ರಿಸಲು ಸಹಕರಿಸಿ ಎಂದು ಮನವಿ ಮಾಡುತ್ತೇನೆ'' ಎಂದಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅವರು, ''ಕೋವಿಡ್ ಸೋಂಕು ಹರಡುವುದನ್ನು ತಡೆಯಲು ನಾವು 14 ದಿನಗಳ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಿ, ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ಸಹಕರಿಸಿ ಎಂದು ಸಮಸ್ತ ನಾಗರಿಕರಲ್ಲಿ ಮನವಿ ಮಾಡುತ್ತೇನೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ, ನಾವು ಒಟ್ಟಾಗಿ ಕೊರೋನಾವನ್ನು ಹಿಮ್ಮೆಟ್ಟಿಸೋಣ'' ಎಂದು ಮನವಿ ಮಾಡಿದ್ದಾರೆ.