ಬೆಂಗಳೂರು, ಮೇ 10 (DaijiworldNews/MB) : ರಾಜ್ಯದಲ್ಲಿ ಇಂದಿನಿಂದ (ಮೇ10) ಲಾಕ್ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಓಡಾಡಿದವರಿಗೆ ಪೊಲೀಸರು ಲಾಠಿ ಬೀಸಿದ ಘಟನೆಗಳು ವರದಿಯಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಲಾಠಿಗಳಿಂದ ಕೊರೊನಾ ಓಡಿಸಲಾಗದು ಎಂದು ಹೇಳಿದೆ. ಹಾಗೆಯೇ ಈ ರೀತಿಯ ಸ್ಥಿತಿ ಮುಂದುವರೆದರೆ ಜನತೆ ದಂಗೆ ಏಳುವ ಸಂಭವವಿದೆ ಎಂದು ಕೂಡಾ ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ.
ರಾಜ್ಯ ಸರ್ಕಾರದ ಲಾಕ್ಡೌನ್ ನಿಯಮವನ್ನು ಟೀಕಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಜನತೆ ಮೊದಲೇ ನೊಂದಿದ್ದಾರೆ ಅವರಿಗೆ ಜೀವದಷ್ಟೇ ಜೀವನವೂ ಮುಖ್ಯ, ಬದುಕು ಸಾಗಿಸುವಲ್ಲಿ ಬಸವಳಿದಿದ್ದಾರೆ. ಲಾಕ್ಡೌನ್ ಹೆಸರಲ್ಲಿ ಜನತೆಯ ಮೇಲಿನ ಪೊಲೀಸ್ ದೌರ್ಜನ್ಯ ನಿಲ್ಲಿಸಬೇಕು. ಲಾಠಿಗಳಿಂದ ಕೊರೊನಾ ಓಡಿಸಲಾಗದು'' ಎಂದು ಹೇಳಿದೆ. ಹಾಗೆಯೇ ''ಜನತೆಗೆ ನೆರವು ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಸರ್ಕಾರ ದೌರ್ಜನ್ಯಕ್ಕೆ ಇಳಿದಿದೆ'' ಎಂದು ದೂರಿರುವ ಕಾಂಗ್ರೆಸ್, ''ಲಾಠಿ ದೌರ್ಜನ್ಯ ನಿಲ್ಲಿಸಿ'' ಎಂದು ಆಗ್ರಹಿಸಿದೆ.
''ಪೊಲೀಸರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆ ಹೊರತು ದೌರ್ಜನ್ಯಕ್ಕೆ ಇಳಿಯಬಾರದು'' ಎಂದು ಕಾಂಗ್ರೆಸ್ ಇನ್ನೊಂದು ಟ್ವೀಟ್ನಲ್ಲಿ ಹೇಳಿದ್ದು, ''ಕಳೆದ ವರ್ಷದ ಲಾಕ್ಡೌನ್ ಮಾಡಿದ ಹಾನಿಯಿಂದ ಇನ್ನೂ ಸುಧಾರಿಸಿಕೊಂಡಿಲ್ಲ, ಅದಲ್ಲದೆ ಕಳೆದ 15 ದಿನದಿಂದ ಅಘೋಷಿತ ಲಾಕ್ಡೌನ್ನಿಂದ ಮತ್ತಷ್ಟು ಜರ್ಜರಿತರಾಗಿದ್ದಾರೆ'' ಎಂದು ಹೇಳಿದೆ. ''ಈ ಹೊತ್ತಿನಲ್ಲಿ ಪೊಲೀಸರು ಸಂಯಮದಿಂದ ವರ್ತಿಸದೆ ಹೋದರೆ ಜನತೆ ದಂಗೆ ಏಳುವ ಸಂಭವವಿದೆ'' ಎಂಬ ಎಚ್ಚರಿಕೆಯನ್ನೂ ಕೂಡಾ ಕಾಂಗ್ರೆಸ್ ನೀಡಿದೆ.
ಇನ್ನು ಇದಕ್ಕೂ ಮುನ್ನ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ್ದ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, "ನಾವು ಹೇಳಿದ್ದು ಜನಹಿತದ ಲಾಕ್ ಡೌನ್ ಆಗಿತ್ತು. ಆದರೆ ಸರ್ಕಾರ ಜಾರಿಗೊಳಿಸಿದ್ದು ದನಕ್ಕೆ ಬಡಿದಂತೆ ಬಡಿಯುವ ಲಾಕ್ಡೌನ್" ಎಂದು ಟೀಕಿಸಿದ್ದಾರೆ.