ಬೆಂಗಳೂರು, ಮೇ.10 (DaijiworldNews/PY): ಬಂಗಾಳದ ಚುನಾವಣೆಗೆ ಹತ್ತಿಪ್ಪತ್ತು ಪ್ರಚಾರ ಸಭೆ ನಡೆಸಿದ 'ಪ್ರಚಾರ ಮಂತ್ರಿ' ಮೋದಿಯವರು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ನೋಡಲಿಲ್ಲ, ಆಕ್ಸಿಜನ್ ಪೂರೈಕೆ ಪರಿಸ್ಥಿತಿಯ ಅವಲೋಕನ ಸಭೆ ನಡೆಸಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಂಗಾಳದ ಚುನಾವಣೆಗೆ ಹತ್ತಿಪ್ಪತ್ತು ಪ್ರಚಾರ ಸಭೆ ನಡೆಸಿದ 'ಪ್ರಚಾರ ಮಂತ್ರಿ' ಮೋದಿಯವರು ಇದುವರೆಗೂ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ನೋಡಲಿಲ್ಲ, ಆಕ್ಸಿಜನ್ ಪೂರೈಕೆ ಪರಿಸ್ಥಿತಿಯ ಅವಲೋಕನ ಸಭೆ ನಡೆಸಲಿಲ್ಲ, ವೈದ್ಯಕೀಯ ತಜ್ಞರ, ವಿಜ್ಞಾನಿಗಳ ಸಭೆ ನಡೆಸಲಿಲ್ಲ, ಪತ್ರಿಕಾಗೋಷ್ಠಿ ನಡೆಸಿ ದೇಶದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ ಎಂದಿದೆ.
"ಕೋವಿಡ್ ನಿರ್ವಹಣೆಯಲ್ಲಿ ವಿಫಲಗೊಂಡ ಬಿಜೆಪಿ ಸರ್ಕಾರಗಳ ರಕ್ಷಣಾತ್ಮಕ ವರಸೆ ಚೆನ್ನಾಗಿದೆ. ದುರಾಡಳಿತವನ್ನು ಟೀಕಿಸಿದರೆ ಇದು ಟೀಕಿಸುವ ಹೊತ್ತಲ್ಲ ಸಹಕರಿಸಿ ಸಲಹೆ ಕೊಡಿ ಎನ್ನುತ್ತಾರೆ.ಮನಮೋಹನ್ ಸಿಂಗ್ರಂತಹ ಮೇಧಾವಿಗಳು ಸಲಹೆ ಕೊಟ್ಟರೂ ಅಹಂನಿಂದ ತಿರಸ್ಕರಿಸುತ್ತಾರೆ. ಭಾವನಾತ್ಮಕ ಪ್ರಚೋದನೆ ರಾಜಕಾರಣದ ಬಿಜೆಪಿಗೆ ಆಡಳಿತಾತ್ಮಕ ಚಿಂತೆಗಳಿಲ್ಲ" ಎಂದು ಕಿಡಿಕಾರಿದೆ.