ನವದೆಹಲಿ, ಮೇ. 10 (DaijiworldNews/HR): ಕೊರೊನಾ ಲಸಿಕೆಯ ಬೆಲೆಗಳಲ್ಲಿನ ವ್ಯತ್ಯಾಸ, ಲಸಿಕೆ ಕೊರತೆ ಹಾಗೂ ನಿಧಾನಗತಿಯ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಟೀಕಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರವಿವಾರ ತಡರಾತ್ರಿ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅಫಿಡವಿತ್ನಲ್ಲಿ ಕೊರೊನಾ ವ್ಯಾಕ್ಸಿನೇಷನ್ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿರುವುದಾಗಿ ವರದಿ ಹೇಳಿದೆ.
ಕೊರೊನಾ ಲಸಿಕೆ ನೀತಿಯ ವಿಚಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಬೇಡ ಎಂದು ಅಫಿಡವಿತ್ ನಲ್ಲಿ ಉಲ್ಲೇಖಿಸಲಾಗಿದ್ದು, ಕೇಂದ್ರ ಸರ್ಕಾರದ ವಿಚಾರದಲ್ಲಿ ನ್ಯಾಯಾಂಗದ ಸಲಹೆ ಉತ್ತಮವಾಗಿದ್ದರೂ ಕೂಡಾ ಹಸ್ತಕ್ಷೇಪದಿಂದ ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಇನ್ನು "ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳ ಸಲಹೆ ಮೇರೆಗೆ ದೇಶದಲ್ಲಿ ಲಸಿಕೆ ವಿತರಣೆ ಮತ್ತು ಬೆಲೆಯನ್ನು ನಿಗದಿಪಡಿಸಲಾಗಿದ್ದು, ಇದರಲ್ಲಿ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಹೆಚ್ಚಿನ ಅವಕಾಶ ಇಲ್ಲ" ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.