ಬಾಗ್ಪತ್, ಮೇ.10 (DaijiworldNews/PY): ಶವಾಗಾರ ಹಾಗೂ ಸ್ಮಶಾನದ ಬಳಿ ಶವಗಳ ಬಟ್ಟೆಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ಉತ್ತರಪ್ರದೇಶದ ಬಾಗ್ಪತ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
"ಮೃತದೇಹದ ಮೈಮೇಲಿನ ಉಡುಪು ಸೇರಿದಂತೆ ಬೆಡ್ಶೀಟ್ಗಳು, ಶವಕ್ಕೆ ಹೊದಿಸಿದ ಬಟ್ಟೆಗಳನ್ನು ಕದಿಯುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 520 ಬೆಡ್ಶೀಟ್ಗಳು ಸೇರಿದಂತೆ 127 ಕುರ್ತಾಗಳು, 52 ಬಿಳಿ ಸೀರೆಗಳು ಹಾಗೂ ಇತರೆ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
"ಆರೋಪಗಳು, ಮೃತದೇಹದ ಮೇಲಿನ ಬಟ್ಟೆಗಳನ್ನು ಕದ್ದು, ಅವುಗಳನ್ನು ಚೆನ್ನಾಗಿ ತೊಳೆದು ಬಳಿಕ ಇಸ್ತ್ರಿ ಮಾಡಿ ಗ್ವಾಲಿಯರ್ ಕಂಪೆನಿಯ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದರು. ಅಲ್ಲದೇ ಬಟ್ಟೆ ಲೂಟಿ ಮಾಡುವುದಕ್ಕಾಗಿ ಈ ಪ್ರದೇಶದ ಕೆಲ ಬಟ್ಟೆ ವ್ಯಾಪಾರಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ನಿತ್ಯ 300 ರೂ. ಅನ್ನು ಪಡೆದುಕೊಳ್ಳುತ್ತಿದ್ದರು" ಎಂದಿದ್ದಾರೆ
"ಬಂಧಿತ ಏಳು ಮಂದಿಯ ಪೈಕಿ ಮೂವರು ಒಂದೇ ಕುಟುಂಬದವರಾಗಿದ್ದಾರೆ. ಇವರು ಕಳೆದ ಹತ್ತು ವರ್ಷಗಳಿಂದಲೂ ಕಳ್ಳತನ ಮಾಡುತ್ತಿದ್ದಾರೆ. ಆರೋಪಿಗಳ ವಿರುದ್ದ ಕಳ್ಳತನ ಪ್ರಕರಣ ಸೇರಿದಂತೆ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.