ಬೆಂಗಳೂರು, ಮೇ 10 (DaijiworldNews/MB) : ರಾಜ್ಯದಲ್ಲಿ ಇಂದಿನಿಂದ ಲಾಕ್ಡೌನ್ ಜಾರಿಯಾಗಿದೆ. ಆದರೆ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಹೋಗುವ 18 ವರ್ಷ ಮೇಲ್ಪಟ್ಟವರು ತಮ್ಮಲ್ಲಿರುವ ಎಸ್ಎಂಎಸ್ ಸಂದೇಶವನ್ನೇ ಪಾಸ್ ಆಗಿ ಬಳಸಿ ಲಸಿಕೆ ಪಡೆಯಲು ತೆರಳಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಲಸಿಕೆ ಪಡೆಯುವವರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಲಸಿಕೆಯ ಸಂದೇಶವನ್ನೇ ಪಾಸ್ ಆಗಿ ಬಳಸಲು ತಿಳಿಸಿರುವ ರಾಜ್ಯ ಸರ್ಕಾರ, ಲಸಿಕೆ ಪಡೆಯುವ ಸಮಯ ನಿಗದಿಯಾಗಿರುವ ಎಸ್ಎಮ್ಎಸ್ ತೋರಿಸಿ ಲಸಿಕೆ ಪಡೆಯುವವರು ಸಂಚರಿಸಬಹುದು. ಪೊಲೀಸರು ಈ ಎಸ್ಎಮ್ಎಸ್ ಪರಿಶೀಲಿಸಿದ ಬಳಿಕವಷ್ಟೇ ಲಸಿಕಾ ಕೇಂದ್ರಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಸೂಚಿಸಿದೆ.
ಇನ್ನು ಈಗಾಗಲೇ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ತಿಳಿಸಿದೆ. ಹಾಗೆಯೇ ಲಸಿಕಾ ಕೇಂದ್ರದಲ್ಲಿ ಯಾವುದೇ ನೋಂದಣಿ ಮಾಡಲಾಗುವುದಿಲ್ಲ ಎಂದು ಕೂಡಾ ಸರ್ಕಾರ ಹೇಳಿದೆ.
ಆನ್ಲೈನ್ನಲ್ಲಿ ನೋಂದಣಿ ಮಾಡಿದ ಬಳಿಕ ಲಸಿಕೆ ಪಡೆಯುವ ದಿನ, ಸಮಯದ ಬಗ್ಗೆ ಫಲಾನುಭವಿಗಳಿಗೆ ಸಂದೇಶ ಬರಲಿದ್ದು, ಆ ಸಂದೇಶ ಲಭಿಸಿದವರು ಮಾತ್ರ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಿಗೆ ತೆರಳಬಹುದಾಗಿದೆ.
ರಾಜ್ಯದಲ್ಲಿ ಇಂದಿನಿಂದ (ಮೇ10)18 ರಿಂದ 44 ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು 18 ವರ್ಷ ಮೇಲ್ಟಟ್ಟ100 ಮಂದಿಗೆ ಮಾತ್ರ ಪ್ರತಿದಿನ ಪ್ರತಿ ಕೇಂದ್ರದಲ್ಲಿ ಲಸಿಕೆ ನೀಡುತ್ತೇವೆ. ಈ 100 ಜನರ ಸ್ಲಾಟ್ ನಿಗದಿಯಾದ ಬಳಿಕ ಅಂದಿನ ಸ್ಲಾಟ್ ಪಡೆಯುವ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.