ಬೆಂಗಳೂರು, ಮೇ 10 (DaijiworldNews/MB) : ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಕಂಡು ಬಂದಿರುವ ನಡುವೆ ಜನರು ತಮ್ಮ ತಮ್ಮ ಮನೆಗಳಲ್ಲಿ ಆಕ್ಸಿಜನ್ ದಾಸ್ತಾನು ಮಾಡಿಕೊಳ್ಳುತ್ತಿರುವುದರ ವಿರುದ್ದ ರಾಜ್ಯ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮವಾಗಿ ಆಕ್ಸಿಜನ್ ದಾಸ್ತಾನು ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಆಕ್ಸಿಜನ್ ಕೊರತೆ ಇದೆ ಎಂದು ಆತಂಕಕ್ಕೆ ಒಳಗಾಗಿ ತಮ್ಮ ತಮ್ಮ ಮನೆಯಲ್ಲೇ ಆಕ್ಸಿಜನ್ ಅಕ್ರಮ ದಾಸ್ತಾನು ಮಾಡುವವರ ವಿರುದ್ದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಗೆಯೇ ಎಲ್ಲಾ ಕೋವಿಡ್ ಕೇರ್ ಕೇಂದ್ರಗಳು ಹಾಗೂ ಎಲ್ಲಾ ವ್ಯವಸ್ಥೆಗಳು ಕಾರ್ಯಾಚರಣೆ ಮಾಡಲು ಆರಂಭಿಸಿದ ಬಳಿಕ ಜನರು ಆಕ್ಸಿಜನ್ ಕೊರತೆಯ ಆತಂಕದಲ್ಲಿ ಮನೆಯಲ್ಲಿ ಆಕ್ಸಿಜನ್ ದಾಸ್ತಾನು ಮಾಡುತ್ತಿದ್ದಾರೆ ಎಂದು ಕೂಡಾ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಾದ್ಯಂತ ಕೊರೊನಾ ಸೋಂಕು ಹೆಚ್ಚಳದ ನಡುವೆ ಆಕ್ಸಿಜನ್ ಕೊರತೆ ಕಾಣಿಸಿಕೊಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಲವಾರು ಮಂದಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.