ಬೆಂಗಳೂರು, ಮೇ.10 (DaijiworldNews/PY): ಕೊರೊನಾ ವಿರುದ್ದದ ಹೋರಾಟಕ್ಕೆ 100 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥೆ ಸುಧಾಮೂರ್ತಿ ಅವರು ಘೋಷಣೆ ಮಾಡಿದ್ದಾರೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಕೊರೊನಾ ಆಸ್ಪತ್ರೆಗಾಗಿ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್ ಕೊರೊನಾ ವಿರುದ್ದದ ಹೋರಾಟಕ್ಕೆ ಇದೀಗ ಮತ್ತೆ 100 ಕೋಟಿ ರೂ. ದೇಣಿಗೆ ನೀಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, "ಕಳೆದ ವರ್ಷ ಬೆಂಗೂರಿನಲ್ಲಿ ಕೊರೊನಾ ಆಸ್ಪತ್ರೆಗೆ ನೆರವು ನೀಡಿದ್ದು, ಇದೀಗ ಆ ಆಸ್ಪತ್ರೆ ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ 100 ಕೋಟಿ. ರೂ. ಪೈಕಿ ಶೇ.50ರಷ್ಟು ಹಣವನ್ನು ಪಿಎಂ ಕೇರ್ಸ್ಗೆ ನೀಡಿದ್ದೆವು. ಈ ಬಾರಿ 100 ಕೋಟಿ. ರೂ. ಅನ್ನು ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಬಳಸಿಕೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.
"ನಮ್ಮ ನೆರವಿನ ಹಸ್ತವನ್ನು ಇದೀಗ ನಮ್ಮ ಸಂಸ್ಥೆ ಇರುವ ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ತಿರುವನಂತಪುರ ಹಾಗೂ ದೆಹಲಿಯಲ್ಲೂ ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಲಿದ್ದೇವೆ. ಈ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಅವಶ್ಯಕವಿರುವ ಸ್ಯಾನಿಟೈಸರ್, ವೆಂಟಿಲೇಟರ್ಗಳು, ಆಮ್ಲಜನಕದ ಕಾನ್ಸನ್ಟ್ರೇಟರ್ಗಳು ಪಿಪಿಇ ಕಿಟ್ಗಳು ಹಾಗೂ ಇತರ ಅಗತ್ಯ ಉಪಕರಣಗಳನ್ನು ಪೂರೈಸುತ್ತೇವೆ. ಇದರೊಂದಿಗೆ ದಿನಗೂಲಿ ಕಟ್ಟಡ ಕಾರ್ಮಿಕರಿಗೆ, ಆಟೋ ಚಾಲಕರಿಗೆ ಅಕ್ಕಿ ಹಾಗೂ ಆಹಾರದ ಕಿಟ್ಗಳನ್ನು ಪೂರೈಸುತ್ತಿದ್ದೇವೆ. ಅಲ್ಲದೇ, ಲಸಿಕಾ ಜಾಗೃತಿಯನ್ನು ಕೂಡಾ ಮೂಡಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.