ನವದೆಹಲಿ, ಮೇ 10 (DaijiworldNews/MB) : ಕೊರೊನಾ ಸೋಂಕಿಗೆ ಒಳಪಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜ್ಞಾನಿ ಹಾಗೂ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಮಹಾವೀರ್ ನರ್ವಾಲ್ ಅವರು ರವಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಈ ಬಗ್ಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಯು ಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದೆ. ಹಾಗೆಯೇ ಹಲವು ನಾಯಕರು ಮಹಾವೀರ್ ನರ್ವಾಲ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಹಾಗೆಯೇ ''ಸಿಪಿಐಎಂ ಹಿರಿಯ ಸದಸ್ಯ ಕಾಮ್ರೇಡ್ ಮಹಾವೀರ್ ನರ್ವಾಲ್ ಅವರ ನಿಧನಕ್ಕೆ ಸಿಪಿಐಎಂ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅವರ ಮಗಳು ನತಾಶಾ ನರ್ವಾಲ್ ಅವರನ್ನು ಕಳೆದ ವರ್ಷ ಬಂಧಿಸಲಾಗಿದೆ. ಕೂನೆಗೂ ಆಕೆಯ ತಂದೆಯನ್ನು ಆಕೆಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂಬುದು ಮೋದಿ ಸರ್ಕಾರದ ಅಪರಾಧ ಕೃತ್ಯ'' ಎಂದು ದೂರಿದೆ. ಹಾಗೆಯೇ ''ಲಾಲ್ ಸಲಾಮ್ ಮಹಾವೀರ್ ನರ್ವಾಲ್'' ಎಂದು ಟ್ವೀಟಿಸಿದೆ.
ಇನ್ನು ಮಹಾವೀರ್ ನರ್ವಾಲ್ ಅವರ ಪುತ್ರ ಆಕಾಶ್ ನವಾರ್ಲ್ ಅವರಿಗೂ ಕೊರೊನಾ ದೃಢಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಪಿಂಜ್ರಾ ಟಾಡ್ ಕಾರ್ಯಕರ್ತೆಯಾಗಿರುವ ಮಹಾವೀರ್ ಅವರ ಪುತ್ರಿ ನತಾಶಾ ನರ್ವಾಲ್ ಅವರು ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ತಿಹಾರ್ ಜೈಲಿನಲ್ಲಿದ್ದಾರೆ.