ಬೆಂಗಳೂರು, ಮೇ 10 (DaijiworldNews/MS): ರಾಜ್ಯದಲ್ಲಿ ಇಂದಿನಿಂದ (ಮೇ10)18 ರಿಂದ 44 ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್, ಮೇ 10ರಿಂದ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸರ್ಕಾರಿ ಆಸ್ಪತ್ರೆ, ಸರ್ ಸಿ.ವಿ.ರಾಮನ್ ಆಸ್ಪತ್ರೆ, ಇಎಸ್ಐ ಮತ್ತು ನಿಮ್ಹಾನ್ಸ್ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಲಸಿಕೆ ನೀಡುತ್ತೇವೆ. ಉಳಿದಂತೆ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಯುವಕರಿಗೆ ಲಸಿಕೆ ನೀಡಲು ನಿರ್ಧರಿಸಿದ್ದರೂ ಆರೋಗ್ಯ ಸೇತು ಆಪ್ ಅಥವಾ ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿ ಲಸಿಕೆ ಪಡೆಯುವ ಸಮಯ ನಿಗದಿಯಾಗಿದ್ದರೆ ಮಾತ್ರ ಲಸಿಕೆ ನೀಡಲಾಗುತ್ತದೆ. ರಾಜ್ಯದಲ್ಲಿ ಅಂದಾಜಿನ ಪ್ರಕಾರ 18ರಿಂದ 44 ವರ್ಷದೊಳಗಿನ 3.26 ಕೋಟಿ ಜನರಿದ್ದಾರೆ. ಇವರೆಲ್ಲರಿಗೂ ಲಸಿಕೆ ಕೊಡಲು ಒಟ್ಟು 6.52 ಕೋಟಿ ಡೋಸ್ ಬೇಕಾಗಬಹುದು. ಇದಕ್ಕಾಗಿ ಸರ್ಕಾರದಿಂದ 2 ಕೋಟಿ ಕೋವಿಶೀಲ್ಡ್, 1 ಕೋಟಿ ಕೋವಾಕ್ಸಿನ್ ಲಸಿಕೆ ಡೋಸ್ಗೆ ಬೇಡಿಕೆ ಇಟ್ಟಿದ್ದೇವೆ. ಸೀರಂ ಸಂಸ್ಥೆಯಿಂದ ಈವರೆಗೆ 6.5ಲಕ್ಷ ಕೋವಿಶೀಲ್ಡ್ ಬಂದಿದೆ. ಇನ್ನಷ್ಟು ಲಸಿಕೆ ಮುಂದಿನ ಕೆಲವು ವಾರಗಳಲ್ಲಿ ಬರಲಿದೆ.
ಸಮಯ ನಿಗದಿ ಹೇಗೆ ?
ಈಗಾಗಲೇ ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿದವರು, ಹೊಸದಾಗಿ ನೋಂದಣಿ ಮಾಡಿಸಿದವರು, ಮೇ 10 ರ ಬೆಳಗ್ಗೆ 1 0ಗಂಟೆಯ ಬಳಿಕ ಲಸಿಕಾ ಕೇಂದ್ರ ಮತ್ತು ಸಮಯ ನಿಗದಿಪಡಿಸಿಕೊಳ್ಳಬಹುದು. ಅದೇ ದಿನ ಲಸಿಕೆ ಕೇಂದ್ರ ಆಯ್ಕೆ ಮಾಡಿ ಅಂದೇ ಲಸಿಕೆ ಪಡೆಯಬಹುದಾಗಿದೆ.
ಪ್ರತಿ ಕೇಂದ್ರದಲ್ಲಿ ನಿತ್ಯ 100 ಮಂದಿಗೆ ಮಾತ್ರ
ರಾಜ್ಯ ಸರ್ಕಾರ ಯುವಕರಿಗೆ ಲಸಿಕೆ ನೀಡಲು ನಿರ್ಧರಿಸಿದ್ದರೂ ಕೋವಿನ್ ಪೋರ್ಟಲ್ನಲ್ಲಿ ಲಸಿಕೆ ಪಡೆಯುವ ಸಮಯ ನಿಗದಿಯಾಗುತ್ತಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು 18 ವರ್ಷ ಮೇಲ್ಟಟ್ಟ100 ಮಂದಿಗೆ ಮಾತ್ರ ಪ್ರತಿದಿನ ಪ್ರತಿ ಕೇಂದ್ರದಲ್ಲಿ ಲಸಿಕೆ ನೀಡುತ್ತೇವೆ. ಈ 100 ಜನರ ಸ್ಲಾಟ್ ನಿಗದಿಯಾದ ಬಳಿಕ ಅಂದಿನ ಸ್ಲಾಟ್ ಪಡೆಯುವ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.