ಕಲಬುರ್ಗಿ, ಮೇ.09 (DaijiworldNews/PY): ಮಾಜಿ ಸಚಿವ, ಮಾಜಿ ಸಂಸದ ಕೆ.ಬಿ. ಶಾಣಪ್ಪ (79) ಅವರು ಕೊರೊನಾದಿಂದ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.
ಇವರಿಗೆ ನಾಲ್ಕೈದು ದಿನಗಳ ಹಿಂದೆ ಕೊರೊನಾ ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಶಾಣಪ್ಪ ಅವರು ಮೂಲರ್ತ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದವರಾಗಿದ್ದು, ಕಲಬುರ್ಗಿ ಭಾಗದ ದಲಿತ ನಾಯಕರಾಗಿದ್ದರ. ಅಲ್ಲದೇ ಇವರು ವಾಡಿನ ಎಸಿಸಿ ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಮುಖಂಡರಾಗಿದ್ದರು. ಶಾಣಪ್ಪ ಅವರು ಅಂದಿನ ಶಹಾಬಾದ್ ವಿಧಾನಸಭಾ ಕ್ಷೇತ್ರದಿಂದ ಭಾರತ ಕಮ್ಯುನಿಸ್ಟ್ ಪಕ್ಷ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಬಳಿಕ ಇವರು ಜೆ.ಎಚ್. ಪಟೇಲ್ ಸಂಪುಟದಲ್ಲಿ ಅಬಕಾರಿ ಸಚಿವರಾದರು. ಆದರೆ, ಸಮಯದಲ್ಲಿ ಶಾಸಕರಾಗಿಲ್ಲದ ಕಾರಣ ಶಾಣಪ್ಪ ಅವರನ್ನು ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡಲಾಗಿತ್ತು. ಇದಾದ ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಬಳಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು.
ಶಾಣಪ್ಪ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.