ನವದೆಹಲಿ, ಮೇ 09 (DaijiworldNews/MB) : ದೇಶದಾದ್ಯಂತ ಈಗ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಲಿದೆ. ಪ್ರಸ್ತುತ ಕೊರೊನಾ ಸೋಂಕು ಪ್ರಕರಣಗಳು ನಗರ ಮಾತ್ರವಲ್ಲದೇ ಹಳ್ಳಿಗಳಲ್ಲೂ ಅಧಿಕವಾಗಿ ಹರಡುತ್ತಿದೆ ಎಂದು ವರದಿಯಾಗುತ್ತಿದೆ. ಈ ವಿಚಾರವಾಗಿ ಪರೋಕ್ಷವಾಗಿ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕುಟುಕಿದ್ದಾರೆ.
ಪ್ರಸ್ತುತ ಕೊರೊನಾ ಸೋಂಕು ನಗರಗಳಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲೂ ಹಾನಿ ಉಂಟು ಮಾಡುತ್ತಿದೆ ಎಂಬ ವರದಿಯನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ''ನಗರಗಳ ನಂತರ, ಈಗ ಹಳ್ಳಿಗಳು ಕೂಡಾ ಪರಮಾತ್ಮ ನಿರ್ಭರವಾಗಿದೆ'' ಎಂದು ಪರೋಕ್ಷವಾಗಿ ಆತ್ಮನಿರ್ಭರ ಪರಿಕಲ್ಪನೆಯನ್ನು ಟೀಕಿಸಿದ್ದಾರೆ.
ಇನ್ನು ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಅವರು, ''ದೇಶಕ್ಕೆ ಪಿ ಎಂ ಆವಾಝ್ ಅಲ್ಲ, ದೇಶಕ್ಕೆ ಉಸಿರು ಬೇಕಾಗಿದೆ'' ಎಂದು ಹೇಳಿದ್ದಾರೆ. ಹಾಗೆಯೇ ಆಕ್ಸಿಜನ್ ಸಿಲಿಂಡರ್ಗಳನ್ನು ಹಿಡಿದು ಸಾಲು ನಿಂತಿರುವ ದೃಶ್ಯ ಹಾಗೂ ಇಂಡಿಯಾ ಗೇಟ್ನಲ್ಲಿ ಕಾಮಾಗಾರಿ ನಡೆಯುವ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆ ಈಗಾಗಲೇ ಹಲವು ರಾಜ್ಯಗಳಲ್ಲಿ ಲಾಕ್ಡೌನ್, ಕರ್ಫ್ಯೂ ಹೇರಲಾಗಿದೆ. ಈವರೆಗೆ 2,22,96,414 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 2,42,362 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಈವರೆಗೆ 1,83,17,404 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 37,36,648 ಪ್ರಕರಣಗಳು ಸಕ್ರಿಯವಾಗಿದೆ.