ನವದೆಹಲಿ, ಮೇ. 09 (DaijiworldNews/HR): ಭಾರತದಲ್ಲಿ ಕೊರೊನಾದ ಎರಡನೇ ಅಲೆಯು ತೀವ್ರವಾಗಿದ್ದು, ಈ ನಡುವೆ ಸೋಂಕಿನ ಮೂರನೇ ಅಲೆಯ ಬಗ್ಗೆ ಜನರಲ್ಲಿ ಆತಂಕವೂ ಇನ್ನಷ್ಟು ಹೆಚ್ಚಾಗಿದ್ದು, ಸರಿಯಾದ ರೀತಿಯಲ್ಲಿ ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿದರೆ ಮತ್ತು ಲಸಿಕೆಯನ್ನು ಪಡೆದರೆ ಮೂರನೇ ಅಲೆಯ ತೀವ್ರತೆಯು ಕಡಿಮೆ ಇರಬಹುದು" ಎಂದು ತಜ್ಞರು ಹೇಳಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ ರಾಘವನ್, "ಕೊರೊನಾದ ಹೊಸ ಅಲೆಗಾಗಿ ನಾವು ಸಿದ್ಧರಾಗಿರಬೇಕು, ಮುನ್ನೆಚ್ಚರಿಕಾ ಕ್ರಮಗಳು, ಕಣ್ಗಾವಲು, ನಿಯಂತ್ರಣ ಕ್ರಮಗಳು, ಚಿಕಿತ್ಸೆ ಮತ್ತು ಪರೀಕ್ಷೆಯ ಬಗ್ಗೆ ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸಿದರೆ ಲಕ್ಷಣರಹಿತ ಸೋಂಕಿನ ಪ್ರಸರಣವನ್ನು ತಡೆಯಬಹುದು" ಎಂದು ತಿಳಿಸಿದ್ದಾರೆ.
ಇನ್ನು "ಜನರಲ್ಲಿ ನೈಸರ್ಗಿಕವಾಗಿ ಮತ್ತು ಲಸಿಕೆಯ ಮೂಲಕ ಅಭಿವೃದ್ದಿಗೊಳ್ಳುವ ರೋಗನಿರೋಧಕ ಶಕ್ತಿಯು ಕೆಲವು ತಿಂಗಳಿನಲ್ಲಿ ಕಡಿಮೆಯಾಗುತ್ತದೆ, ಹಾಗಾಗಿ ಆ ವೇಳೆ ವೈರಸ್ ಮತ್ತೆ ದಾಳಿ ಮಾಡಬಹುದು. ಆದ ಕಾರಣ ಜನರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ, ತಮ್ಮನ್ನು ತಾವು ರಕ್ಷಿಸಿದರೆ ಮಾತ್ರ ಸೋಂಕಿನಿಂದ ದೂರವಿರಬಹುದಾಗಿದೆ" ಎಂದಿದ್ದಾರೆ.
"ಈ ವರ್ಷದ ಆರಂಭದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿದ್ದಾಗ ಜನರು ವೈರಸ್ ಇಲ್ಲವೇ ಎಂಬ ರೀತಿಯಲ್ಲಿ ಓಡಾಡಲು ಆರಂಭಿಸಿದ್ದು, ಜನರು ಗುಂಪುಗೂಡುವುದು, ಮಾಸ್ಕ್ ಧರಿಸದೇ ಓಡಾಡುವ ಮೂಲಕ ವೈರಸ್ಗೆ ಹರಡಲು ಅವಕಾಶ ಕಲ್ಪಿಸಿಕೊಟ್ಟರು" ಎಂದು ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟೆಗ್ರಲ್ ಬಯಾಲಜಿಯ ನಿರ್ದೇಶಕ ಡಾ.ಅನುರಾಗ್ ಅಗರ್ವಾಲ್ ಹೇಳಿದ್ದಾರೆ.