ಮುಂಬೈ, ಮೇ.09 (DaijiworldNews/PY): ವೈದ್ಯನೆಂದು ಪೋಸ್ ನೀಡಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಣ್ಣಿನ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದ ಕಾಮತಿ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬಂಧಿತನನ್ನು ಚಂದನ್ ನರೇಶ್ ಚೌಧರಿ ಎಂದು ಗುರುತಿಸಲಾಗಿದೆ.
ಚಂದನ್ ನರೇಶ್ ಚೌಧರಿ ಮೊದಲು ಹಣ್ಣು ಹಾಗೂ ಐಸ್ಕ್ರೀಂ ವ್ಯಾಪಾರಿಯಾಗಿದ್ದ. ನಂತರ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಈತ ಓಂ ನಾರಾಯಣ ಮಲ್ಟಿಪರ್ಪಸ್ ಸೊಸೈಟಿ ಹೆಸರಿನ ಚಾರಿಟೇಬಲ್ ಔಷಧಾಲಯವನ್ನು ನಡೆಸುತ್ತಿದ್ದ. ಈತ ಕಳೆದ ಐದು ವರ್ಷಗಳಿಂದ ಈತ ಈ ಔಷಧಾಲಯವನ್ನು ನಡೆಸುತ್ತಿದ್ದು, ರೋಗಿಗಳಿಗೆ ಆಯುರ್ವೇದ, ನ್ಯಾಚುರೋಪತಿ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗಿದೆ.
ಕೊರೊನಾ ಸಂದರ್ಭವನ್ನು ಬಳಸಿಕೊಂಡು ತನ್ನ ಔಷಧಾಲಯದಲ್ಲೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಶುರುಮಾಡಿದ್ದಾನೆ. ಆದರೆ, ಈತನಿಗೆ ಪರಿಚಯವಿದ್ದ ವ್ಯಕ್ತಿಯೋರ್ವ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಮೇರೆಗೆ ಚೌಧರಿಯ ಔಷಧಾಲಯದ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಕಲಿ ವೈದ್ಯನನ್ನು ಬಂಧಿಸಿದ್ದಾರೆ. ಅಲ್ಲದೇ, ಔಷಧಾಲಯದಲ್ಲಿದ್ದ ಆಕ್ಸಿಜನ್ ಸಿಲಿಂಡರ್, ಸಿರಿಂಜ್ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.