ಕೋಲ್ಕತ್ತ, ಮೇ.09 (DaijiworldNews/PY): "ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಡಲು ಇರುವ ವೈದ್ಯಕೀಯ ಉಪಕರಣ ಸೇರಿದಂತೆ ಎಲ್ಲಾ ಔಷಧಗಳ ಮೇಲಿನ ತೆರಿಗೆ ಹಾಗೂ ಸೀಮಾ ಸುಂಕಗಳನ್ನು ಮನ್ನಾ ಮಾಡಬೇಕು" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, "ಕೊರೊನಾ ರೋಗಿಗಳ ಆರೈಕೆಗೆ ಅವಶ್ಯಕವಾದ ಔಷಧಿಗಳು, ಉಪಕರಣಗಳು ಹಾಗೂ ಆಮ್ಲಜನಕ ಸಮರ್ಪಕ ರೀತಿಯಲ್ಲಿ ದೊರಕುವಂತೆ ವ್ಯವಸ್ಥೆ ಮಾಡಬೇಕು. ಅಲ್ಲದೇ ಆರೋಗ್ಯ ಸೌಕರ್ಯವನ್ನು ಬಲಪಡಿಸಬೇಕು" ಎಂದಿದ್ದಾರೆ.
"ನೆರವು ನೀಡಲು ಹಲವಾರು ಸಂಘಟನೆಗಳು ಸೇರಿದಂತೆ ಏಜೆನ್ಸಿಗಳು ಹಾಗೂ ವ್ಯಕ್ತಿಗಳು ಮುಂದೆ ಬಂದಿದ್ದಾರೆ. ಅವರೂ ಕೂಡಾ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಸೀಮ ಸುಂಕ, ರಾಜ್ಯ ಜಿಎಸ್ಟಿ, ಕೇಂದ್ರ ಜಿಎಸ್ಟಿ ಮೊದಲಾದ ತೆರಿಗೆಗಳಿಂದ ವಿನಾಯಿತಿ ನೀಡಬೇಕು ಎಂದಿದ್ದಾರೆ. ಕೇಂದ್ರ ಸರ್ಕಾರವು ತೆರಿಗೆ ಮನ್ನಾ ಬೇಡಿಕೆಯನ್ನು ಶೀಘ್ರವೇ ಪರಿಗಣಿಸಬೇಕು" ಎಂದು ಹೇಳಿದ್ದಾರೆ.