ಬೆಂಗಳೂರು, ಮೇ.09 (DaijiworldNews/PY): ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎನ್ನುವ ಗಾದೆಯಂತೆ ಪದಾರ್ಥಕ್ಕೆ ಉಪ್ಪಿಲ್ಲದಿದ್ದರೆ ಹೇಗೆ ರುಚಿ ಇರುವುದಿಲ್ಲವೋ ಹಾಗೆಯೇ ತಾಯಿಗಿಂತ ಮಿಗಿಲಾದ ಸ್ನೇಹಿತರು ಇರುವುದಿಲ್ಲ. ಅವಳಿಗೆ ಯಾವುದೇ ರೀತಿಯಾದ ನೋವನ್ನುಂಟು ಮಾಡದೇ ಆಕೆಯನ್ನು ಗೌರವದಿಂದ ಕಾಣಬೇಕು. ಹೀಗೆ ತಾಯಿಗೆ ಗೌರವ ಹೇಳುವ ಹಾಗೂ ಅವರ ಗುಣಗಾನ ಮಾಡುವ, ಗೌರವಿಸುವ ದಿನವಿಂದು. ಗಣ್ಯರು, ಸೆಲೆಬ್ರಿಟಿಗಳು ಇಂದು ತಮ್ಮದೇ ರೀತಿಯಲ್ಲಿ ಅಮ್ಮನ ದಿನವನ್ನು ನೆನಪಿಸಿ ಗೌರವ ಸೂಚಿಸಿದ್ದಾರೆ.
"ಸ್ವಾರ್ಥ ರಹಿತ ಪ್ರೀತಿ, ತ್ಯಾಗದ ಪ್ರತಿರೂಪ ತಾಯಿ. ನನ್ನ ಹೆತ್ತಮ್ಮ, ನನ್ನ ಪೊರೆದ ತಾಯಿಯರಿಂದ ಪ್ರೀತಿ, ಹಾರೈಕೆಯ ಸವಿಯನ್ನು ಹೆಚ್ಚಾಗೇ ಉಂಡವ ನಾನು. ಈ ರಾಜಕೀಯ ವ್ಯವಸ್ಥೆಯಲ್ಲಿ ಸ್ವಲ್ಪವಾದರೂ ಜನಪರ ಕಾರ್ಯವನ್ನು ನಾನೇನಾದರೂ ಮಾಡಿದ್ದರೆ ಅದರ ಹಿಂದಿನ ಪ್ರೇರಣೆ ತಾಯಿ ಎಂಬ ಶಕ್ತಿ. ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು" ಎಂದು ಮಾಜಿ ಸಿಎಂ ಹೆಚ್.ಡಿಕುಮಾರಸ್ವಾಮಿ ತಿಳಿಸಿದ್ದಾರೆ.
'ಅಮ್ಮ' ಎಂಬ ಎರಡಕ್ಷರಗಳಲ್ಲಿ ಪ್ರಪಂಚವೇ ಇದೆ. ತಾಯಿ ತನ್ನ ಮಕ್ಕಳಿಗಾಗಿ ತನ್ನೆಲ್ಲಾ ಜೀವನವನ್ನು ಮುಡಿಪಾಗಿಡುತ್ತಾಳೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸಲು ಇಂತಹದೇ ದಿನ ಆಗಬೇಕು ಎಂದಿಲ್ಲ. ಪ್ರತಿನಿತ್ಯವೂ ನಾವು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಎಲ್ಲಾ ತಾಯಂದಿರಿಗೆ ಹೃತ್ಪೂರ್ವಕ ಶುಭಾಶಯಗಳು, ಧನ್ಯವಾದಗಳು. ಮಾತೃದೇವೋ ಭವ ! ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಗೌರವ ಸೂಚಿಸಿದ್ದಾರೆ.
"ತಾಯಿ ನಮ್ಮ ಜೀವನದ ಪ್ರೇರಣೆ, ಪೋಷಣೆ ಎಲ್ಲವೂ ಆಗಿದ್ದಾಳೆ. ನಾವು ಯಾರು ಎನ್ನುವುದನ್ನು ಜಗತ್ತಿಗೆ ಪರಿಚಯಿಸಿದವಳು ತಾಯಿ. ಇದಕ್ಕಾಗಿ ನಾವು ಪ್ರತಿದಿನ ಪ್ರಜ್ಞಾಪೂರ್ವಕವಾಗಿ ಬದುಕೋಣ" ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸಾರ್ ಸ್ವರಾಜ್ ಅವರು ಟ್ವೀಟ್ ಮೂಲ ಕ ಶುಭಕೋರಿದ್ದು, "ಐರನ್ ಲೇಡಿ ಆಫ್ ಇಂಡಿಯಾ ಸುಷ್ಮಾ ಸ್ವರಾಜ್ ನಿಮ್ಮನ್ನು ನಾನು ತುಂಬಾ ಪ್ರೀತಿಸುತ್ತೇನೆ. ತಾಯಂದಿರ ದಿನಾಚರಣೆಯ ಶುಭಾಶಯಗಳು ಮಾ" ಎಂದು ತಿಳಿಸಿದ್ದಾರೆ.