ಬೆಂಗಳೂರು, ಮೇ. 09 (DaijiworldNews/HR): "ಕೊರೊನಾದ ಎರಡನೇ ಅಲೆ ಹರಡುವುದನ್ನು ತಡೆಯುವುದಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಸೆಮಿ ಲಾಕ್ಡೌನ್ಗೆ ಅರ್ಥವಿಲ್ಲ. ಜನರ ಆರೋಗ್ಯ ಕಾಪಾಡುವ ನಿಜವಾದ ಕಳಕಳಿ ಸರ್ಕಾರಕ್ಕೆ ಇದ್ದರೆ, ಕಳೆದ ವರ್ಷದಂತೆ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಬೇಕು" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಕೈಚೆಲ್ಲಿ ಕುಳಿತಿದ್ದಾರೆ. ಜೊತೆಗೆ ಕೊರೊನಾ ಮಾರ್ಗಸೂಚಿ ಗಮನಿಸಿದರೆ ಸರ್ಕಾರಕ್ಕೆ ಕೊರೊನಾ ಹೋಗುವುದು ಬೇಕಿಲ್ಲ. ಜನರ ಜೀವಕ್ಕಿಂತ ತೆರಿಗೆ, ಆದಾಯವೇ ಮುಖ್ಯವಾಗಿದೆ" ಎಂದರು.
"ಸೋಂಕಿತರ ಸಂಖ್ಯೆ ಐವತ್ತು ಸಾವಿರದ ಆಸುಪಾಸಿನಲ್ಲಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಕೊರೊನಾ ಹೆಚ್ಚಳ ಹಾಗೂ ಜನರ ಸಾವು ಸೇರಿದಂತೆ ರಾಜ್ಯದ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ" ಎಂದು ಆರೋಪಿಸಿದ್ದಾರೆ.
ಇನ್ನು ಮೆಡಿಕಲ್ ಸ್ಟೋರ್ಗಳಿಗೆ ಅವಕಾಶ ನೀಡಿ ವಾಹನ ನಿರ್ಬಂಧಿಸಿದರೆ ಹೇಗೆ? ಸರ್ಕಾರಕ್ಕೆ ಸಾಮಾನ್ಯ ಜ್ಞಾನವೇ ಇಲ್ಲ. ಔಷಧಿಯಂತಹ ಅಗತ್ಯ ವಸ್ತು ಖರೀದಿಸಲು ತೊಂದರೆ ಆಗಬಾರದು" ಎಂದು ಹೇಳಿದ್ದಾರೆ.