National
ಕೊರೊನಾ ನಿಯಂತ್ರಣಕ್ಕೆ ಸರ್ಕಾರಕ್ಕೆ ಹಲವು ಸಲಹೆ ನೀಡಿದ ಸಿದ್ದರಾಮಯ್ಯ
- Sun, May 09 2021 11:01:19 AM
-
ಬೆಂಗಳೂರು, ಮೇ.09 (DaijiworldNews/PY): "ಕೊರೊನಾ ನಿಯಂತ್ರಣಕ್ಕೆ ನಾಳೆಯಿಂದ ಕಠಿಣ ಕ್ರಮಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳಿರುವುದರಿಂದ ಈಗಾಗಲೇ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ದುಡಿಯುವ ವರ್ಗಕ್ಕೆ ನೆರವಾಗುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದು, ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
"ರಾಜ್ಯದಲ್ಲಿ ಸದ್ಯ ಬೇಡಿಕೆ ಇರುವುದಕ್ಕಿಂತ ಹೆಚ್ಚಿನ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಆದರೆ, ನಮ್ಮಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಅನ್ನು ಕೇಂದ್ರವು ತೋಳದಂತೆ ಕಿತ್ತುಕೊಂಡು ಹೋಗುತ್ತಿದೆ. ಈ ಕೂಡಲೇ ರಾಜ್ಯವು ಪ್ರತಿಭಟನೆ ಮಾಡಿ ರಾಜ್ಯದ ರೋಗಿಗಳನ್ನು ಉಳಿಸಿಕೊಳ್ಳುವುದು ಮೊದಲ ಆದ್ಯತೆ. ಆದ್ದರಿಂದ ನಮ್ಮ ರಾಜ್ಯದ ರೋಗಿಗಳ ಅಗತ್ಯವನ್ನು ಪೂರೈಸಿದ ಬಳಿಕ ಉಳಿದದ್ದನ್ನು ತೆಗೆದುಕೊಂಡು ಹೋಗಿ ಎಂದು ಹೇಳಬೇಕು" ಎಂದಿದ್ದಾರೆ.
"ಮುಂದಿನ ದಿನಗಳಲ್ಲಿ ಹೆಚ್ಚಾಗುವ ಬೇಡಿಕೆಯ ಕುರಿತು ತಜ್ಞರ ಅಭಿಪ್ರಾಯ ಪಡೆದು ಜಿಲ್ಲಾವಾರು ಆಕ್ಸಿಜನ್ ಘಟಕಗಳನ್ನು ಈಗಲೇ ಸ್ಥಾಪಿಸಿ ಸಮಸ್ಯೆ ಬಗೆಹರಿಸಬೇಕು. ಆಕ್ಸಿಜನ್ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಹತ್ತಾರು ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೂಡಲೇ ಈ ದಂಧೆಯನ್ನು ನಿಲ್ಲಿಸಿ ಮನೆಗಳಲ್ಲೇ ವೈದ್ಯರ ಮಾರ್ಗದರ್ಶನದ ಪ್ರಕಾರ ಮನೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೂ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಮಾಡಬೇಕು" ಎಂದು ತಿಳಿಸಿದ್ದಾರೆ.
"ಆಕ್ಸಿಜನ್ ಉತ್ಪಾನೆಯಾಗುತ್ತಿರುವ ಪ್ರದೇಶಗಳಲ್ಲೇ ಆಕ್ಸಿಜನ್ ಲಭ್ಯತೆಯ ಆಧಾರದ ಮೇಲೆ ತಾತ್ಕಾಲಿಕ ಕೊರೊನಾ ಆಸ್ಪತ್ರೆಯನ್ನು ಸ್ಥಾಪಿಸಬೇಕು. ಜಿಲ್ಲಾವಾರು ಚಿಕಿತ್ಸೆ ಎಂಬ ಅವೈಜ್ಞಾನಿಕ ವಿಧಾನವನ್ನು ಕೈಬಿಟ್ಟು ಸುತ್ತಮುತ್ತಲ ಏಳೆಂಟು ಜಿಲ್ಲೆಗಳ ರೋಗಿಗಳನ್ನು ಒಂದು ಕಡೆ ತಂದು ಆಕ್ಸಿಜನ್ ನೀಡಿ ರಕ್ಷಿಸಬೇಕು. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಸುರಕ್ಷಿತವಾಗಿ ಆಕ್ಸಿಜನ್ ಸಾಗಿಸಲು ಬೇಕಾದ ವಾಹನಗಳನ್ನು ಪ್ರತಿ ದಿನ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿಸುತ್ತಾ ಹೋಗಬೇಕು" ಎಂದಿದ್ದಾರೆ.
"ರೆಮ್ಡಿಸಿವರ್ ಔಷಧವನ್ನು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಯಾವ ಸಮಸ್ಯೆ ಇದೆ ಎಂದು ದೇಶದ ಜನರಿಗೆ ಹೇಳಬೇಕು. ಈ ಜೀವರಕ್ಷಕ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಇದನ್ನು ತಡೆಯಲು ಅತ್ಯಂತ ಸಮರ್ಥ ಅಧಿಕಾರಿಗಳಿಗೆ ಉಸ್ತುವಾರಿ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
"ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಪ್ರತಿ ರೋಗಿಗೆ ಕನಿಷ್ಟ ಮಟ್ಟದ ಮೊತ್ತವನ್ನು ನಿಗದಿಪಡಿಸಲಾಗಿದೆ. ಅದರಿಂದ ಸಮರ್ಪಕವಾಗಿ ರೆಮ್ಡಿಸಿವರ್ನಂಥ ಔಷಧಗಳನ್ನೂ ನೀಡಲಾಗುತ್ತಿಲ್ಲ ಎಂಬ ಮಾಹಿತಿ ಇದೆ. ಈ ಅವ್ಯವಸ್ಥೆಯನ್ನು ಸರಿ ಮಾಡಬೇಕು" ಎಂದು ತಿಳಿಸಿದ್ದಾರೆ.
"ರಾಜ್ಯದ ಅಸಹಾಯಕ ರೋಗಿಗಳಿಗೆ ಸಾಮಾನ್ಯ, ಐ.ಸಿ.ಯು, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಇರುವ ಸಾಕಷ್ಟು ಬೆಡ್ಗಳನ್ನು ಸ್ಥಾಪಿಸಲು ಯಾವ ಸಮಸ್ಯೆ ಇದೆ? ಬೆಡ್ಗಳು ಎಷ್ಟು ಬೇಕಾಗಬಹುದು ಎಂಬುದನ್ನು ಮೊದಲೇ ಅಂದಾಜಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಒದಗಿಸಲು ಹಾಗೂ ಹೆಚ್ಚಿಸಲು ಇರುವ ಸಮಸ್ಯೆಗಳೇನು?. ಏಕೆ ಇಂತ ನಿರ್ಲಕ್ಷ್ಯ, ಸರ್ಕಾರ ಇದರ ಬಗ್ಗೆ ಕೂಡಲೇ ಕಾರ್ಯೋನ್ಮುಖರಾಗಬೇಕು" ಎಂದು ಒತ್ತಾಯಿಸಿದ್ದಾರೆ.
"ವೈದ್ಯರುಗಳಿಗೆ ಸಂಬಂಧಿಸಿದಂತೆ, ಖಾಸಗಿ, ನಿವೃತ್ತರಾದವರನ್ನು ಅಗತ್ಯ ಬಿದ್ದರೆ ನೇಮಿಸಿಕೊಳ್ಳಬೇಕು. ದಾದಿಯರ ವಿಷಯದಲ್ಲೂ ಹಾಗೆ ಮಾಡಬೇಕು. ಈಗಾಗಲೇ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಂಡಿರುವ ಅಂತಿಮ ವರ್ಷಗಳಲ್ಲಿರುವ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ನಿಯೋಜಿಸಬೇಕು" ಎಂದು ತಿಳಿಸಿದ್ದಾರೆ.
"ಲಸಿಕೆ ಹಾಕಿಸಿಕೊಳ್ಳದವರಿಗೆ ಆದ್ಯತೆಯ ಮೇಲೆ ಲಸಿಕೆ ಹಾಕಬೇಕು. ಅಗತ್ಯ ಬಿದ್ದರೆ ಕಲ್ಯಾಣ ಮಂಟಪ, ಕ್ರೀಡಾಂಗಣ, ಹಾಸ್ಟೆಲುಗಳು ಮುಂತಾದವುಗಳನ್ನು ತಾತ್ಕಾಲಿಕ ಆಸ್ಪತ್ರೆ ಮಾಡಿ ಚಿಕಿತ್ಸೆ ನೀಡಿ" ಎಂದಿದ್ದಾರೆ.
"ಜನ ಉದ್ಯೋಗಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ನೀಡಬೇಕು. ಜೊತೆಗೆ ಬೇಳೆ, ಅಡುಗೆ ಎಣ್ಣೆ, ಮುಂತಾದ ದಿನಸಿ ಪದಾರ್ಥಗಳುಳ್ಳ ಕಿಟ್ಗಳನ್ನು ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
"ಪ್ರತಿ ಬಿಪಿಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂ. ಗಳನ್ನು ನೀಡಬೇಕು. ನಂತರ ತಿಂಗಳಿಗೆ 6,000 ರೂ. ಗಳನ್ನು ನೀಡಬೇಕು. ರಾಜ್ಯದ ರೈತರಿಗೆ, ಕುಶಲಕರ್ಮಿ ಸಮುದಾಯಗಳಿಗೆ, ಕಾರ್ಮಿಕರಿಗೆ, ಡ್ರೈವರುಗಳಾದಿಯಾಗಿ ಎಲ್ಲ ದುಡಿಯುವ ವರ್ಗಗಳಿಗೆ 10,000 ರೂ. ಗಳನ್ನು ನೀಡಬೇಕು. ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ ಕೈಗಾರಿಕೆಗಳಿಗೆ, ವಾಹನಗಳ ಮಾಲೀಕರ ಸಭೆಗಳನ್ನು ನಡೆಸಿ ಸೂಕ್ತ ಪ್ಯಾಕೇಜನ್ನು ನೀಡಬೇಕು" ಎಂದಿದ್ದಾರೆ.
'ನಗರಗಳಿಂದ ಹಳ್ಳಿಗಳಿಗೆ ದುಡಿಯುವ ಜನ ವಾಪಸಾಗಿದ್ದಾರೆ. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಅತ್ಯಂತ ಸಮರ್ಪಕವಾಗಿ ಬಳಸಬೇಕು. ಕನಿಷ್ಟ 200 ಮಾನವ ದಿನಗಳ ಯೋಜನೆಯನ್ನು ಜಾರಿಗೊಳಿಸಬೇಕು. ಅಗತ್ಯ ಇರುವ ಕಡೆ ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕು. ಪ್ರಸ್ತುತ ಇರುವ ಹಣದುಬ್ಬರವನ್ನು ಆಧರಿಸಿ ನರೇಗಾ ಕೂಲಿ ಮೊತ್ತವನ್ನು ಪರಿಷ್ಕರಿಸಬೇಕು ಮತ್ತು ಹೆಚ್ಚಿಸಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ 4 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಈ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
"ಬಿಜೆಪಿ ಸರ್ಕಾರ ತನ್ನ ಕಾರ್ಪೋರೇಟ್ ಓಲೈಕೆಯನ್ನು ನಿಲ್ಲಿಸಿ ಜನಪರ ಆಧಾರವಾಗಿ ಕೆಲಸ ಮಾಡಬೇಕು. ಈ ಎಲ್ಲ ಸಲಹೆಗಳನ್ನು ಗಂಭಿರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕೆಂದು, ಜನರಿಗೆ ಬಂದೊದಗಿರುವ ಸಂಕಟವನ್ನು ನಿವಾರಿಸಬೇಕು" ಎಂದು ಸರ್ಕಾರವನ್ನು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ನಾಳೆಯಿಂದ ಕಠಿಣ ಕ್ರಮಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳಿರುವುದರಿಂದ ಈಗಾಗಲೇ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ದುಡಿಯುವ ವರ್ಗಕ್ಕೆ ನೆರವಾಗುವಂತೆ ಮುಖ್ಯಮಂತ್ರಿ @BSYBJP ಅವರನ್ನು ಒತ್ತಾಯಿಸುತ್ತೇನೆ. 1/2#CoronaCurfew pic.twitter.com/eOjXzUxhKD
— Siddaramaiah (@siddaramaiah) May 9, 2021