ಹಾಸನ, ಮೇ. 09 (DaijiworldNews/HR): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಆಕ್ಸಿಜನ್, ಬೆಡ್ ಸಮಸ್ಯೆ, ಲಸಿಕೆ ಅಭಾವದ ಬಗ್ಗೆ ತುರ್ತಾಗಿ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಸುಮಾರು ಐವತ್ತು ಸಾವಿರ ಹೊಸ ಕೇಸುಗಳು ದಾಖಲಾಗುತ್ತಿದ್ದು, ಈಗಿರುವ ನಮ್ಮ ವೈದ್ಯಕೀಯ ಸೌಕರ್ಯದ ಮೂಲಕ ಕೋವಿಡ್ ಅನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ"ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಚಾಮರಾಜನಗರ, ಕಲಬುರಗಿ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತ ಪಟ್ಟಿದ್ದು, ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಲಸಿಕೆಯ ಅಭಾವ ತೀವ್ರವಾಗಿ ಕಾಡುತ್ತಿದೆ. ಸೆಪ್ಟಂಬರ್ ನಲ್ಲಿ ಮೂರನೇ ಅಲೆ ದಾಳಿ ಮಾಡುವ ಮುನ್ನ, ನಾವು ಸಿದ್ದತೆಯನ್ನು ಮಾಡಿಕೊಂಡು ಇರಬೇಕು" ಎಂದಿದ್ದಾರೆ.
ಇನ್ನು "ದಿನವೊಂದಕ್ಕೆ ಎರಡರಿಂದ ಮೂರು ಸಾವಿರ ಹೊಸ ಕೊರೊನಾ ಕೇಸುಗಳು ದಾಖಲಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಡ್ ಸಂಖ್ಯೆಯನ್ನು ಹೆಚ್ಚಿಸಲು ಎಂಟರಿಂದ ಹತ್ತು ಕೋಟಿ ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಮಾಡಿದ ಮನವಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.