ಬೆಂಗಳೂರು, ಮೇ 09 (DaijiworldNews/MB) : ಎರಡು ಪ್ರತ್ಯೇಕ ಘಟನೆಗಳಲ್ಲಿ,ರೆಮ್ಡೆಸಿವಿರ್ ಚುಚ್ಚುಮದ್ದನ್ನು ಅನ್ನು ನಿಗದಿತ ದರಕ್ಕಿಂತ ಎಂಟರಿಂದ 10 ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಿದ ಆರೋಪದಲ್ಲಿ ಐವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಈ ಐದು ಜನರನ್ನು ಎರಡು ಪ್ರತ್ಯೇಕ ಘಟನೆಗಳಲ್ಲಿ ಬಂಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು ಇನ್ನೊಬ್ಬ ವ್ಯಕ್ತಿಯನ್ನು ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.
ಆರೋಪಿಗಳನ್ನು ಸಹಕಾರಿ ವಲಯದ ಬ್ಯಾಂಕ್ ಮ್ಯಾನೇಜರ್ ಶಿವಕುಮಾರ್ (32), ವೈದ್ಯಕೀಯ ಸಿಬ್ಬಂದಿ ದರ್ಶನ್ (29), ಲ್ಯಾಬ್ ತಂತ್ರಜ್ಞ ಗಿರೀಶ್ (30) ಮತ್ತು ತರಕಾರಿ ಮಾರಾಟಗಾರ ನಾಗೇಶ್ (43) ಎಂದು ಗುರುತಿಸಿದ್ದಾರೆ. ಹಾಗೆಯೇ ಇನ್ನೊಂದು ಪ್ರಕರಣದ ಆರೋಪಿ ಆನ್ಲೈನ್ ಫಾರ್ಮಾ ವಿತರಣಾ ಕಂಪನಿಯ ಉದ್ಯೋಗಿ ನಯಾಜ್ ಅಹ್ಮದ್ (30) ಎಂದು ಗುರುತಿಸಲಾಗಿದೆ.
ಈ ಎಲ್ಲ ಆರೋಪಿಗಳು ಪ್ರತಿ ಬಾಟಲಿಗೆ 35,000 ರೂ.ಗಳಿಂದ 40,000 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತ ಬ್ಯಾಂಕ್ ಮ್ಯಾನೇಜರ್ ಈ ಬಾಟಲುಗಳನ್ನು ಮಾರಾಟ ಮಾಡಲು ತರಕಾರಿ ಮಾರಾಟಗಾರನನ್ನು ಬಳಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಹಾಗೆಯೇ ಈ ಬ್ಯಾಂಕ್ ಮ್ಯಾನೇಜರ್, ಇತ್ತೀಚೆಗೆ ತನ್ನ ಕೊರೊನಾ ಸೋಂಕಿಗೆ ಒಳಗಾಗಿದ್ದ ಸಂಬಂಧಿ ಸಾವನ್ನಪ್ಪಿದ್ದು ಈ ಔಷಧಿ ಬಾಕಿ ಉಳಿದಿದೆ. ಈ ಹಿನ್ನೆಲೆ ಈ ಔಷಧಿಯನ್ನು ತಾನು ಕೊಂಡುಕೊಂಡ ಬೆಲೆಗೆ ಮಾರಾಟ ಮಾಡಬೇಕು ಎಂದು ತರಕಾರಿ ವ್ಯಾಪಾರಿಯನ್ನು ನಂಬಿಸಿದ್ದಾನೆ ಎಂದು ಹೇಳಲಾಗಿದೆ.
"ಆಸ್ಪತ್ರೆಯಲ್ಲಿ ಕೆಲಸ ಮಾಡುವ ಲ್ಯಾಬ್ ತಂತ್ರಜ್ಞನು ಗ್ರಾಹಕರನ್ನು ಅವನ ಬಳಿಗೆ ಕಳುಹಿಸುತ್ತಿದ್ದನು" ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಾಮಪುರಂ ಪ್ರಕರಣದಲ್ಲಿ ಔಷಧಿ ವಿತರಣಾ ಉದ್ಯೋಗ ಮಾಡುತ್ತಿದ್ದ ಯುವಕ ತನ್ನ ಸಹೋದರನಿಗೆ ಚಿಕಿತ್ಸೆ ನೀಡಲು ಔಷಧಿ ಬೇಕಾಗಿದೆ ಎಂದು ಹೇಳಿ ಕಮಿಷನಿಂಗ್ ಏಜೆಂಟರಿಂದ ಬಾಟಲುಗಳನ್ನು ಎಂಆರ್ಪಿ ದರದಲ್ಲಿ ಖರೀದಿಸಿ, ಬಳಿಕ ಅಧಿಕ ಬೆಲೆಗೆ ಮಾರಾಟ ಮಾಡಿದ್ದಾನೆ.
ಕರ್ನಾಟಕದಲ್ಲಿ, ರೆಮ್ಡೆಸಿವಿರ್ ಬೆಲೆ ಪ್ರತಿ ಬಾಟಲಿಗೆ 899 ರೂ.ಗಳಿಂದ 5,400 ರೂ. ಇದೆ.