ದಾಂತೇವಾಡ, ಮೇ 09 (DaijiworldNews/MB) : ಜಿಲ್ಲೆಯಲ್ಲಿರುವ ಕೊರೊನಾ ಸೋಂಕಿತ ಮಾವೋವಾದಿಗಳು ಶರಣಾದರೆ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ದಾಂತೇವಾಡ ಪೊಲೀಸರು ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್, ''ಜಿಲ್ಲೆಯಲ್ಲಿ ಮಾವೋವಾದಿಗಳು ನಿರಂತರವಾಗಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಹಾಗೆಯೇ ವಿಷಾಹಾರ ಸೇವನೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಹೀಗೆ ಬಳಲುತ್ತಿರುವ ಸೋಂಕಿತರು ಶರಣಾದರೆ ಛತ್ತೀಸಗಡ ಪೊಲೀಸರು ಅವರಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡುತ್ತಾರೆ'' ಎಂದು ಹೇಳಿದ್ದಾರೆ.
''ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್ಜಡ್ಸಿ) ನಾಯಕಿ ಸುಜಾತಾ ಸೇರದಂತೆ ಹಲವು ಮಂದಿಗೆ ಸೋಂಕು ಇದೆ. ಸುಜಾತಾಗೆ ಉಸಿರಾಟದ ಸಮಸ್ಯೆಯೂ ಇದ್ದು ಅವರಿಗೆ ಚಲಿಸಲು ಆಗುತ್ತಿಲ್ಲ ಎಂಬ ಮಾಹಿತಿ ಲಭಿಸಿದೆ. ಅವರು ಚಿಕಿತ್ಸೆ ಪಡೆಯದೆ ತಮ್ಮನ್ನು ಸಂಕಷ್ಟಕ್ಕೆ ದೂಡುವುದು ಮಾತ್ರವಲ್ಲದೆ ಗ್ರಾಮಸ್ಥರಿಗೂ ಸೋಂಕು ಹರಡುವ ಆತಂಕ ಸೃಷ್ಟಿಸುತ್ತಿದ್ದಾರೆ'' ಎಂದು ಆರೋಪಿಸಿದರು.
''ಮಾವೋವಾದಿಗಳು ಶರಣಾಗಿ, ಚಿಕಿತ್ಸೆ ಪಡೆಯಬೇಕು'' ಎಂದು ಮನವಿಯನ್ನೂ ಕೂಡಾ ಮಾಡಿಕೊಂಡರು.