ಬೆಂಗಳೂರು, ಮೇ.08 (DaijiworldNews/PY): "ರಾಜ್ಯದ ಜನತೆ ಕಂಗಾಲಾಗಿದ್ದಾರೆ, ಆನೆ ಕಾಲಿಗೆ ಸಿಕ್ಕ ಇರುವೆಗಳಂತೆ ಸಾಯುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಅಧಿಕಾರ ಉಳಿಸಿಕೊಳ್ಳುವ ಚಿಂತೆ" ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ರಾಜ್ಯದಲ್ಲಿ ಜನ ಸಾಯುತ್ತಿದ್ದಾರೆ, ಇವರಿಗೆ BJPvsBJP ಕಿತ್ತಾಟದ್ದೇ ಚಿಂತೆ. ಬಸವರಾಜ ಬೊಮ್ಮಾಯಿ ಅವರೇ ಕಾಳಸಂತೆ, ಬೆಡ್ ಬ್ಲಾಕಿಂಗ್ ದಂಧೆಯನ್ನು ನಿಯಂತ್ರಿಸುವುದನ್ನು ಬಿಟ್ಟು ದೆಹಲಿಯಲ್ಲೇನು ಕೆಲಸ? ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನದ ತೇಜಸ್ವಿ ಸೂರ್ಯ ಪ್ರಯತ್ನಕ್ಕೆ ತೇಪೆ ಹಚ್ಚಲು ಹೋಗಿದ್ದೀರಾ ಅಥವಾ ಸಿಎಂ ಕುರ್ಚಿಗೆ ನೀವೇ ಟವೆಲ್ ಹಾಕಲು ಹೋಗಿದ್ದೀರಾ?" ಎಂದು ಪ್ರಶ್ನಿಸಿದೆ.
"ತಾನು ಬೆಡ್ ಬ್ಲಾಕಿಂಗ್ ದಂಧೆ ಮಾಡುತ್ತಿದ್ದಿದ್ದನ್ನು ಸ್ವತಃ ಸತೀಶ್ ರೆಡ್ಡಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಹಗರಣವನ್ನು "ಧರ್ಮ" ಎಂದು ಕರೆದುಕೊಂಡಿದ್ದಾರೆ! ಧರ್ಮದ ಹೆಸರಿನಲ್ಲಿಯೇ ನೀಚ ಕೆಲಸ ಮಾಡುವವರಲ್ಲವೇ. ತೇಜಸ್ವಿ ಸೂರ್ಯ ಎಲ್ಲಿದ್ಯಾಪ್ಪಾ? ಇದರಲ್ಲಿ ತಮ್ಮದೆಷ್ಟು ಪಾಲು? ಸಂಪರ್ಕಕ್ಕೆ ಸಿಗದೆ ಅಡಗಿ ಕುಳಿತಿದ್ದೇಕೆ?" ಎಂದು ಕೇಳಿದೆ.
"ಇತ್ತ ರಾಜ್ಯದ ಜನತೆ ಕಂಗಾಲಾಗಿದ್ದಾರೆ, ಆನೆ ಕಾಲಿಗೆ ಸಿಕ್ಕ ಇರುವೆಗಳಂತೆ ಸಾಯುತ್ತಿದ್ದಾರೆ. ಅತ್ತ ಬಿಜೆಪಿ ಮಂತ್ರಿಗಳು ಚೌಕಾಶಿ ವ್ಯವಹಾರಕ್ಕೆ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರ ಉಳಿಸಿಕೊಳ್ಳುವ ಚಿಂತೆ, ಹಲವರಿಗೆ ಬಿಎಸ್ವೈ ಮುಕ್ತ ಬಿಜೆಪಿ ಮಾಡುವ ಚಿಂತೆ" ಎಂದಿದೆ.
"ರಾಜ್ಯದಲ್ಲಿ ಕರೋನಾ ಸೋಂಕಿನಿಂದ ಹಾಹಾಕರವೆದ್ದಿದೆ. ಜವಾಬ್ದಾರಿ ಮರೆತ ಬಿಜೆಪಿ ಎಂದಿನಂತೆ BJPvsBJP ಕಿತ್ತಾಟ ಮುಂದುವರೆಸಿದೆ. ಈ ಸರ್ಕಾರದಲ್ಲಿ ಯಾವುದರಲ್ಲೂ ಸಮನ್ವಯತೆ ಇಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ, ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಬೇಕಾದ ಜಿಂದಾಲ್ ಭೂಮಿ ಪರಾಭಾರೆ ವಿಚಾರ ಹಿಡಿದು ಬೀದಿ ಜಗಳದಂತೆ ಕಿತ್ತಾಡುತ್ತಿದ್ದಾರೆ" ಎಂದು ಹೇಳಿದೆ.