ಬೆಂಗಳೂರು, ಮೇ.08 (DaijiworldNews/PY): ಮೇ 11ರ ಒಳಗೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳ ವಾರ್ಡ್ ಹಾಗೂ ಐಸಿಯುಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಎಲ್ಲಾ ಜಿಲ್ಲಾ ಶಸ್ತ್ರ ಚಿಕಿತ್ಸಕರು, ವೈದ್ಯಕೀಯ ಅಧೀಕ್ಷಕರು, ನೋಡಲ್ ಅಧಿಕಾರಿಗಳು ಹಾಗೂ ಆಡಳಿತ ವೈದ್ಯಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, "2021ರ ಮೇ 7ರ ಕೊರೊನಾ ನಿಯಂತ್ರಣ ಹಾಗೂ ಮೇಲ್ವಿಚಾರಣೆ ಸಭೆಯಲ್ಲಿ ಸೂಚಿಸಿದಂತೆ ಎಲ್ಲಾ ಜಿಲ್ಲ ಹಾಗೂ ತಾಲೂಕು ಆಸ್ಪತ್ರೆಗಳ ವಾರ್ಡ್ ಹಾಗೂ ಐಸಿಯುಗಳಲ್ಲಿ ಮೇ 11ರ ಒಳಗೆ ಸಿಸಿಟಿ ಅಳವಡಿಸಿಕೊಳ್ಳಲು ಆಸ್ಪತ್ರೆಗಳ ನಿರ್ದೇಶಕರು ಸೇರಿದಂತೆ ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಶಸ್ತ್ರಚಿಕಿತ್ಸಕರು, ಆಡಳಿತ ವೈದ್ಯಾದಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ತಾಂತ್ರಿಕ ವೈಶಿಷ್ಟಗಳ ವಿವಿರವನ್ನೂ ನೀಡಲಾಗಿದ್ದು, ಮತ್ತೊಮ್ಮೆ ಈ ಸುತ್ತೋಲೆಯೊಂದಿಗೆ ನೀಡಲಾಗಿದೆ" ಎಂದು ತಿಳಿಸಿದೆ.
"ಆರೋಗ್ಯ ರಕ್ಷಾ ಸಮಿತಿ ಅನುದಾನದಿಂದ ಅಥವಾ ಆಸ್ಪತ್ರೆಯ ಲಭ್ಯವಿರುವ ಇತರೇ ಅನುದಾನದಿಂದ ಸಿಸಿಟಿವಿ ಅಳವಡಿಸಿಕೊಳ್ಳಲು ತಗಲುವ ವೆಚ್ಚವನ್ನು ಭರಿಸಿಕೊಳ್ಳಲು ಸೂಚಿಸಿ, ಆದೇಶಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಸದರಿ ಜಿಲ್ಲೆಗಳ ನೋಡಲ್ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಬಗ್ಗೆ ಪರಿಶೀಲನೆ ನಡೆಸಿ 2021ರ ಮೇ 12ರ ಒಳಗೆ ವರದಿ ಸಲ್ಲಿಸಬೇಕು" ಎಂದು ವಿವರಿಸಿದೆ.