ಕೋಲ್ಕತ್ತ, ಮೇ.08 (DaijiworldNews/PY): "ದೇಶದಲ್ಲಿ ಸಾರ್ವತ್ರಿಕ ಲಸಿಕೆ ಯೋಜನೆಯನ್ನು ರೂಪಿಸಬೇಕು. ಕೇಂದ್ರ ಸರ್ಕಾರಕ್ಕೆ 30,000 ಕೋಟಿ ರೂ. ದೊಡ್ಡದಲ್ಲ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಶನಿವಾರ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಅವರು, "ದೇಶದ ಎಲ್ಲಾ ನಾಗರಿಕರಿಗೂ ಉಚಿತ ಕೊರೊನಾ ಲಸಿಕೆ ನೀಡಬೇಕು ಎಂದು ಪ್ರಧನಿ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ನೂತನ ಸಂಸತ್ ಭವನ ಹಾಗೂ ಪ್ರತಿಮೆಯ ನಿರ್ಮಾಣಕ್ಕೆ 20,000 ಕೋಟಿ ರೂ. ವ್ಯಯಿಸುತ್ತಿರುವ ಅವರು ಕೊರೊನಾ ಲಸಿಕೆಗಾಗಿ 30,000 ಕೋಟಿ ರೂ.ಖರ್ಚು ಮಾಡಲು ಏಕೆ ಬಿಡುತ್ತಿಲ್ಲ. ಹಾಗಾದರೆ, ಪಿಎಂ ಕೇರ್ಸ್ ಫಂಡ್ ಎಲ್ಲಿದೆ?" ಎಂದು ಕೇಳಿದ್ದಾರೆ.
"ಬೇರೆ ಬೇರೆ ರಾಜ್ಯಗಳ ನಾಯಕರು ಹಾಗೂ ಕೇಂದ್ರ ಸಚಿವರುಗಳಿಗಾಗಿ ಬಿಜೆಪಿ ಸಾಕಷ್ಟು ಹೊಟೇಲ್ಗಳನ್ನು ಮಾಡಿಕೊಂಡಿದ್ದು, ಇಲ್ಲಿಗೆ ಎಲ್ಲಾ ಸಚಿವರುಗಳು ಬಂದು ಪಿರೂರಿ ನಡೆಸಿದರು. ಇದಕ್ಕಾಗಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಅದೇ ಹಣವನ್ನು ಲಸಿಕೆಗೆ ನೀಡಿದ್ದರೆ, ರಾಜ್ಯಕ್ಕೆ ನೆರವಾಗುತ್ತಿತ್ತು" ಎಂದಿದ್ದಾರೆ.
"ಲಸಿಕೆ ಖರೀದಿ ಮಾಡಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು, ಅನುಮತಿ ದೊರೆತಿಲ್ಲ. ರಾಜ್ಯ ಲಸಿಕೆ ಹಾಗೂ ಆಕ್ಸಿಜನ್ ಕೊರೆತೆಯಿಂದ ಸಂಕಷ್ಟಕ್ಕೆ ಒಳಗಾಗಿದೆ" ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.