ಬೆಂಗಳೂರು, ಮೇ. 08 (DaijiworldNews/HR): "ಬೆಡ್ ಬುಕಿಂಗ್ ಹಗರಣದಲ್ಲಿ ಬಿಜೆಪಿ ನಾಯಕರೇ ಕಿಂಗ್ ಪಿನ್ಗಳಾಗಿದ್ದು, ಬಳಿಕ ನಾಟಕ ಕೂಡ ಅವರೇ ಮಾಡುತ್ತಾರೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಸದ ತೇಜಸ್ವಿ ಸೂರ್ಯ ಕಪಟ ನಾಟಕ ಸೂತ್ರದಾರನಾಗಿದ್ದು, ಅಲ್ಲಿ ಇರುವವರನನ್ನು ಖಾಲಿ ಮಾಡಿಸಬೇಕು. ತಮ್ಮ ಬೆಂಬಲಿಗರನ್ನು ಅಲ್ಲಿ ತಂದು ಕೂರಿಸಬೇಕೆಂದು ಈ ರೀತಿ ಮಾಡಿದ್ದು, ಪುಡಿ ರೌಡಿಗಳ ರೀತಿ ಇವರು ಬೆಂಬಲಿಗರು ವಿಡಿಯೋ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
"ತೇಜಸ್ವಿ ಸೂರ್ಯ ಮತ್ತೆ ಅಲ್ಲಿಗೆ ಹೋಗಿ ವಿಡಿಯೋ ಆಫ್ ಮಾಡಿ ಕ್ಷಮಾಪಣೆ ಕೇಳಿದ್ದು, ಇವರು ಸಂಸದರಾಗುವುದಕ್ಕೆ ನಾಲಾಯಕ್, ಇವರೆಲ್ಲರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು" ಎಂದಿದ್ದಾರೆ.
ಇನ್ನು "ಬಿಜೆಪಿ ರೌಡಿ ಶಾಸಕರು ಮತ್ತು ಪುಡಿ ರೌಡಿಗಳ ಕಾರ್ಯಕರ್ತರಿಂದ ಈ ಘಟನೆ ಮಾಡಿದ್ದು, ಐಎಎಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿಗಳು ಐಎಎಸ್ ಅಧಿಕಾರಿಗಳಿಗೆ ರಕ್ಷಣೆ ಕೊಡಬೇಕು. ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು" ಎಂದು ಹೇಳಿದ್ದಾರೆ.