ನವದೆಹಲಿ, ಮೇ 08 (DaijiworldNews/MB) : ''ಮುಂದಿನ ಮೂರು ತಿಂಗಳಲ್ಲಿ ದೆಹಲಿಯಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು 2.6 ಕೋಟಿ ಡೋಸ್ ಲಸಿಕೆ ನೀಡಿ'' ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಶನಿವಾರ ಆನ್ಲೈನ್ ಬ್ರೀಫಿಂಗ್ನಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ''ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ 100 ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಇನ್ನು ಮುಂದೆ ಕೊರೊನಾ ಲಸಿಕಾ ಕೇಂದ್ರಗಳ ಸಂಖ್ಯೆಯನ್ನು ಮೂರು ಪಟ್ಟು ಅಧಿಕಗೊಳಿಸಲಾಗುತ್ತದೆ. ಈ ಕೇಂದ್ರಗಳ ಸಂಖ್ಯೆಯನ್ನು 250-300 ಕ್ಕೆ ಹೆಚ್ಚಿಸಲಾಗುವುದು'' ಎಂದು ತಿಳಿಸಿದರು.
ಇನ್ನು ''ಸುಮಾರು 40 ಲಕ್ಷ ಡೋಸ್ಗಳು ನಮಗೆ ಲಭ್ಯವಾಗಿದೆ. ದೆಹಲಿಯಲ್ಲಿ ಎಲ್ಲ ಜನರಿಗೂ ಕೊರೊನಾ ಲಸಿಕೆ ನೀಡುವ ಸಲುವಾಗಿ, ಮೂರು ಕೋಟಿಗೂ ಹೆಚ್ಚು ಡೋಸ್ಗಳು ಬೇಕಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಮುಂದಿನ ಮೂರು ತಿಂಗಳಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು 2.6 ಕೋಟಿ ಡೋಸ್ ಲಸಿಕೆ ನೀಡಿ. ತಿಂಗಳಿಗೆ 85 ಲಕ್ಷ ಡೋಸೇಜ್ ನೀಡಿ'' ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.