ನವದೆಹಲಿ, ಮೇ.08 (DaijiworldNews/PY): ಕೊರೊನಾ ವಿಚಾರಕದ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಕೊರೊನಾ ಲಸಿಕೆಗೂ ಜಿಎಸ್ಟಿ ವಿಧಿಸುವ ಕೇಂದ್ರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ, ಆದರೆ ಪ್ರಧಾನಿ ಮೋದಿ ಅವರು ಮಾತ್ರ ತೆರಿಗೆ ವಸೂಲಿಯನ್ನು ನಿಲ್ಲಿಸುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಸಿಕೆಯ ಮೇಲೆ ಶೇ.5ರಷ್ಟು ಕೇಂದ್ರ ಸರ್ಕಾರ ತೆರಿಗೆ ವಿಧಿಸಿರುವ ಬಗ್ಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಈಗಾಗಲೇ ಪ್ರಶ್ನಿಸಿವೆ. ಇದೀಗ ರಾಹುಲ್ ಗಾಂಧಿ ಅವರು ಕೂಡಾ ಈ ಬಗ್ಗೆ ಕೆಂಡಕಾರಿದ್ದಾರೆ.
ಕೊರೊನಾ ಲಸಿಕೆಯ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸಿರುವ ಕಾರಣ ಪ್ರತೀ ಡೋಸ್ಗೆ ರಾಜ್ಯ ಸರ್ಕರಗಳು 15-20 ರೂ. ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಭಾರತದಲ್ಲಿ ಅಭಿವೃದ್ದಿಯಾದ ಕೊರೊನಾ ಲಸಿಕೆಗೆ ಜಿಎಸ್ಟಿ ವಿಧಿಸುತ್ತಿರುವ ಸಂಬಂಧ ಛತ್ತೀಸ್ಗಡ ಸೇರಿದಂತೆ ರಾಜಸ್ತಾನ ಹಾಗೂ ಹಲವು ರಾಜ್ಯಗಳು ವಿರೋಧಿಸಿವೆ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪತ್ರ ಬರೆದಿದ್ದು, ಕೊರೊನ ಲಸಿಕೆಯ ಮೇಲಿನ ಜಿಎಸ್ಟಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.