ನವದೆಹಲಿ, ಮೇ 08 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಬೆಡ್, ಆಕ್ಸಿಜನ್ಗಳ ಕೊರತೆಗಳು ಕೂಡಾ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಏತನ್ಮಧ್ಯೆ ಸರ್ಕಾರದ ವಿರುದ್ದ ಭಾರತೀಯ ವೈದ್ಯಕೀಯ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ಕೊರೊನಾ ಸಮಸ್ಯೆ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಆಲಸ್ಯತನ ನಮಗೆ ಆಶ್ಚರ್ಯ ಮೂಡಿಸಿದೆ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವೈದ್ಯಕೀಯ ಸಂಘ, ''ಸರ್ಕಾರವು ವಾಸ್ತವ್ಯ ಅರಿಯದೇ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. ಐಎಂಎ ಮತ್ತು ವೃತ್ತಿಪರ ಸಹೋದ್ಯೋಗಿಗಳು ತೆಗೆದುಕೊಂಡ ಪೂರ್ವಭಾವಿ ಸಿದ್ಧತೆ ಮುಂತಾದವುಗಳನ್ನು ಸರ್ಕಾರ ಗಾಳಿಗೆ ತೂರಿದೆ. ಪ್ರಸ್ತುತ ಕೆಲವು ರಾಜ್ಯಗಳಲ್ಲಿ 10 ದಿನಗಳಿಂದ 15 ದಿನ ಲಾಕ್ಡೌನ್ ಘೋಷಣೆ ಮಾಡುವ ಬದಲಾಗಿ ಯೋಜಿತ ಪೂರ್ವನಿರ್ಧರಿತ ರಾಷ್ಟ್ರೀಯ ಲಾಕ್ಡೌನ್ ಮಾಡುವುದು ಉತ್ತಮ'' ಎಂದು ಅಭಿಪ್ರಾಯಿಸಿದೆ.
''ಹಾಗೆಯೇ ಈ ರೀತಿ ಯೋಜಿಸಿ ಲಾಕ್ಡೌನ್ ಮಾಡುವುದರಿಂದ ಆರೋಗ್ಯ ಮೂಲಸೌಕರ್ಯವನ್ನು ಸಿದ್ದಪಡಿಸಲು ಸಮಯಾವಕಾಶ ದೊರೆಯುತ್ತದೆ'' ಎಂದು ಸಲಹೆ ನೀಡಿರುವ ಐಎಂಎ, ''ಪ್ರತಿದಿನ ನಾಲ್ಕು ಲಕ್ಷದಷ್ಟು ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಲಾಕ್ಡೌನ್ ಮಾಡಲು ಹಿಂದುಮುಂದು ನೋಡುತ್ತಿದೆ. ಈಗ ರಾತ್ರಿ ಕರ್ಫ್ಯೂ ಮಾಡಲಾಗುತ್ತಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರಸ್ತುತ ಕೊರೊನಾ ಹರಡುವಿಕೆ ತಡೆಯಲು ಲಾಕ್ಡೌನ್ ಮಾಡುವುದು ಉತ್ತಮ'' ಎಂದು ಹೇಳಿದೆ.
ಇನ್ನು ಇದೇ ವೇಳೆ, ''ದೇಶದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯಾಗುತ್ತಿದೆ. ದಿನದಿಂದ ದಿನಕ್ಕೆ ಆಕ್ಸಿಜನ್ ಕೊರತೆ ಅಧಿಕವಾಗುತ್ತಿದೆ. ಆಕ್ಸಿಜನ್ ಇಲ್ಲದೆಯೇ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಜನರಲ್ಲಿ ಆತಂಕ ಉಂಟಾಗುತ್ತಿದೆ ಎಂದು ಹೇಳಿರುವ ಐಎಂಎ, ಆಕ್ಸಿಜನ್ ಉತ್ಪಾದನೆಯಾಗುತ್ತಿದೆ, ಆದರೆ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲ'' ಎಂದು ಹೇಳಿದೆ.