ಬೆಂಗಳೂರು, ಮೇ.08 (DaijiworldNews/PY): ನಕಲಿ ಜ್ಯೋತಿಷಿಯ ಮಾತನ್ನು ನಂಬಿ 14 ವರ್ಷದ ಪುತ್ರ ತನ್ನ ತಂದೆ-ತಾಯಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತರನ್ನು ಸಂಖ್ಯಾ ಸಂಗ್ರಹಣಾಧಿಕಾರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಹನುಮಂತರಾಯ (45) ಹೊನ್ಮಮ್ಮ (34) ಎಂದು ಗುರುತಿಸಲಾಗಿದೆ.
ಹನುಮಂತರಾಯ ಹಾಗೂ ಹೊನ್ಮಮ್ಮ ಅವರು ಯಾದಗಿರಿ ಜಿಲ್ಲೆಯ ಸುರಪುರದವರಾಗಿದ್ದು, ಕರಿಹೋಬನಹಳ್ಳಿಯ ಬೃಂದಾವನ ನಗರದ ಕಚೇರಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ಇವರಿಬ್ಬರ ಮೃತದೇಹ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ದಂಪತಿಯನ್ನು ಹತ್ಯೆಗೈದು ಕೆಎಎಸ್ ಅಧಿಕಾರಿಯ ಚೇಂಬರ್ನ ವಾಷ್ ರೂಂನಲ್ಲಿ ಹಾಕಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ್ದ ಪೊಲೀಸರು ಜೋಡಿ ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೀಣ್ಯ ಪೊಲೀಸರು ದಂಪತಿಗಳ ಎರಡನೇ ಪುತ್ರನನ್ನು ಬಂಧಿಸಿ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ಈತ ಗಾಂಜಾ ಸೇವೆನೆ ದಾಸನಾಗಿದ್ದ. ಒಮ್ಮೆ ಜ್ಯೋತಿಷಿಯನ್ನು ಭೇಟಿ ಮಾಡಿ ಶಾಸ್ತ್ರ ಕೇಳಿದ್ದ. ಆ ವೇಳೆ ಜ್ಯೋತಿಷಿ ನಿನಗೆ ಪಿತೃ ದೋಷವಿದೆ. ನೀನು ಚೆನ್ನಗಿ ಇರಬೇಕಾದರೆ ನಿಮ್ಮ ತಂದೆಯನ್ನು ಸಾಯಿಸಬೇಕು ಎಂದು ಹೇಳಿದ್ದ. ಜ್ಯೋತಿಷಿಯ ಮಾತನ್ನು ನಂಬಿದ್ದ ಬಾಲಕ ತಂದೆಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾನೆ.
ಮೇ 6ರ ಗುರುವಾರದಂದು ಈತ ಗಾಂಜಾ ಮತ್ತಿನಲ್ಲಿ ತಂದೆಯನ್ನು ಹತ್ಯೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ತಾಯಿಯನ್ನು ಕೂಡ ಹತ್ಯೆಗೈದಿದ್ದಾನೆ. ಬಳಿಕ ಇಬ್ಬರ ಮೃತದೇಹವನ್ನು ವಾಷ್ ರೂಂ ನಲ್ಲಿ ಹಾಕಿ ಬೀಗ ಹಾಕಿದ್ದು, ತನ್ನ ಪ್ಯಾಂಟ್ ಜೇಬಿನಲ್ಲಿ ಕೀ ಅನ್ನು ಬಚ್ಚಿಟ್ಟಿದ್ದ.
ಘಟನೆಯ ಬಗ್ಗೆ ಮೊದಲನೇ ಪುತ್ರ ಪ್ರಕಾಶ್ ದೂರು ನೀಡಿದ್ದ. ಪ್ರಕರಣ ತನಿಖೆ ನಡೆಸಿದ ಪೊಲೀಸರು ಕೀ ನೀಡಿದ ಸುಳಿವಿನ ಮೇರೆಗೆ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದು, ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ಬಾಲಕ ನೀಡಿದ ಮಾಹಿತಿ ಮೇರೆಗೆ ಜ್ಯೋತಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.