ಗಾಂಧಿನಗರ, ಮೇ 08 (DaijiworldNews/MB) : ಅಪರೂಪದ ಅನುವಂಶಿಕ ಕಾಯಿಲೆಯಾದ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ ಮಗುವೊಂದನ್ನು ಉಳಿಸಲು ದಂಪತಿ ಕ್ರೌಡ್ಫಂಡಿಂಗ್ ಮಾಡಿದ್ದು ಇದರಿಂದಾಗಿ ಸುಮಾರು 16 ಕೋಟಿ ರೂ. ಸಂಗ್ರಹಿಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಗುಜರಾತ್ನ ಮಹಿಸಾಗರ್ ಜಿಲ್ಲೆಯ ಲುನಾವಾಡಾ ಪಟ್ಟಣದ ಸಮೀಪವಿರುವ ಗ್ರಾಮವಾದ ಕನೆಸರ್ ಮೂಲದ ದಂಪತಿಗಳಾದ ರಾಜ್ದೀಪ್ಸಿಂಗ್ ರಾಥೋಡ್ ಹಾಗೂ ಜಿನಾಲ್ಬಾ ಬೆನ್ನುಹುರಿಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ 5 ತಿಂಗಳ ಮಗನಾದ ಧೈರ್ಯರಾಜ್ಗೆ ಜೀನ್ ಥೆರಪಿ ಇಂಜೆಕ್ಷನ್ ಖರೀದಿಸಲು ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್ ಸಹಾಯದ ಮೂಲಕ 16 ಕೋಟಿ ರೂ. ಸಂಗ್ರಹಿಸಿದ್ದಾರೆ. ರಾಥೋಡ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಗುವಿನ ತಂದೆ ರಾಜ್ದೀಪ್ಸಿಂಗ್ ರಾಥೋಡ್, ''ನಮ್ಮ ಮಗುವನ್ನು ಉಳಿಸಲು ಈ ವರ್ಷದ ಆರಂಭದಲ್ಲಿ ನಾವು ಅಭಿಯಾನವನ್ನು ಪ್ರಾರಂಭಿಸಿದೆವು. 42 ದಿನಗಳಲ್ಲಿ ನಾನು ಹಾಗೂ ನನ್ನ ಪತ್ನಿ ಜಿನಾಲ್ಬಾ ಮಗುವಿನ ಇಂಜೆಕ್ಷನ್ಗೆ ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್ ಸಹಾಯದಿಂದ 16 ಕೋಟಿ ರೂ. ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮಗುವಿಗೆ ಚುಚ್ಚುಮದ್ದನ್ನು ನೀಡಲಾಗಿದೆ'' ಎಂದು ಹೇಳಿದ್ದು ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
''ಬೆನ್ನು ಮೂಳೆಯ ಸ್ನಾಯು ಕ್ಷೀಣತೆಗೆ ಏಕೈಕ ಚಿಕಿತ್ಸೆಯಾದ ಜೀನ್ ಥೆರಪಿ ಇಂಜೆಕ್ಷನ್ ಅನ್ನು ಸ್ವಿಸ್ ಫಾರ್ಮಾ ದೈತ್ಯ ನೊವಾರ್ಟಿಸ್ ಸಿದ್ದಪಡಿಸಿದೆ. ಇದನ್ನು ಆರ್ಡರ್ ಮಾಡಿ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಯಿತು. ಕೆಲ ದಿನಗಳ ಹಿಂದೆ ಯುಎಸ್ನಿಂದ ಈ ಇಂಜೆಕ್ಷನ್ ಆಗಮಿಸಿದ್ದು ಮಂಗಳವಾರ ನಮ್ಮ ಮಗನನ್ನು ಆಸ್ಪತ್ರೆಗೆ ದಾಖಲಿಸಿ, ಬುಧವಾರ ಇಂಜೆಕ್ಷನ್ ನೀಡಲಾಗಿದೆ. ಭಾರತದಲ್ಲಿ ಅದರ ಬೆಲೆ 16 ಕೋಟಿ ರೂ. ಆಗಿದೆ. ಸುಮಾರು 6.5 ಕೋಟಿ ರೂ. ಕಸ್ಟಮ್ಸ್ ಸುಂಕವೇ ಇದೆ. ಆದರೆ ಕೇಂದ್ರ ಸರ್ಕಾರ ಮಾನವೀಯ ನೆಲೆಯಲ್ಲಿ ಇದನ್ನು ಮನ್ನಾ ಮಾಡಿದೆ'' ಎಂದು ಕೂಡಾ ತಿಳಿಸಿದ್ದಾರೆ.
''ನಮ್ಮ ಮಗುವನ್ನು ಉಳಿಸಲು ಈ ಇಂಜೆಕ್ಷನ್ ಚಿಕಿತ್ಸೆ ಒಂದೇ ಪರಿಹಾರವಾಗಿತ್ತು. ಆದರೆ ನಮ್ಮ ಬಳಿ ಅಷ್ಟೊಂದು ಹಣವಿರಲಿಲ್ಲ. ಆದ್ದರಿಂದ ನಾವು ಕ್ರೌಡ್ಫಂಡಿಂಗ್ಗಾಗಿ ಇಂಪ್ಯಾಕ್ಟ್ ಗುರು ವೇದಿಕೆಯ ಸಹಾಯವನ್ನು ಪಡೆದುಕೊಂಡು ಅಭಿಯಾನ ನಡೆಸಿದೆವು. ಈಗ ನಮ್ಮ ಮಗ ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಆಶಯ ನಮಗಿದೆ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.