ಆಂಧ್ರಪ್ರದೇಶ, ಮೇ. 08 (DaijiworldNews/HR): ಕಲ್ಲುಗಣಿಯಲ್ಲಿ ಸ್ಫೋಟ ಸಂಭವಿಸಿ ಹತ್ತು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಡಪದಲ್ಲಿ ಶನಿವಾರ ನಡೆದಿದೆ.
ಈ ಅವಘಡ ಮಾಮಿಲ್ಲಪಲ್ಲೆ ಗ್ರಾಮದ ಸಮೀಪ ಸಂಭವಿಸಿದ್ದು, ಜಿಲೆಟಿನ್ ಕಡ್ಡಿಗಳನ್ನು ಅನ್ಲೋಡ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಗಣಿಗಾರಿಕೆಯಲ್ಲಿ ಅನುಮತಿ ಪಡೆದೇ ನಡೆಸಲಾಗುತ್ತಿದ್ದು, ಜಿಲೆಟಿನ್ ಕಡ್ಡಿಗಳನ್ನು ಅನ್ಲೋಡ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ ಎಂದು ಕಡಪ ಜಿಲ್ಲೆಯ ಪೊಲೀಸ್ ಅಧಿಕಾರಿ ಕೆ.ಎ.ಅನ್ಬುರಾಜನ್ ಮಾಹಿತಿ ನೀಡಿದ್ದಾರೆ.
ಇನ್ನು ಸ್ಪೋಟದಿಂದ ಮೃತಪಟ್ಟವರಲ್ಲಿ ಹೆಚ್ಚಿನವರು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸ್ಥಳೀಯ ಗ್ರಾಮವಾದ ಪುಲಿವೆಂಡುಲ ಮೂಲದವರು ಎಂದು ಹೇಳಲಾಗುತ್ತಿದೆ.
ಸ್ಪೋಟಗೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿಯವರು ಕಡಪ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರ ಕುರಿತು ಸಂತಾಪ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ಪಕ್ಕದ ಹಳ್ಳಿಗಳಲ್ಲಿ ಕೂಡ ನಡುಕ ಉಂಟುಮಾಡಿದೆ ಎಂದು ತಿಳಿದು ಬಂದಿದೆ.