ಬೆಂಗಳೂರು, ಮೇ 08 (DaijiworldNews/MB) : ರಾಜ್ಯದಲ್ಲಿ ಕೊರೊನಾ ಕೊರೊನಾ ಪರಿಸ್ಥಿತಿ ನಿಭಾಯಿಸಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಹತ್ತು ಸಲಹೆಗಳನ್ನು ನೀಡಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂಬ ಆಶಾ ಭಾವವಿದೆ ಎಂದು ತಿಳಿಸಿದ್ದಾರೆ.
ಹತ್ತು ಸಲಹೆಗಳನ್ನು ಒಳಗೊಂಡ ಪ್ರತಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಹೆಚ್ಡಿಕೆ, ಕೋವಿಡ್ ತಡೆಯಲು ಪ್ರತಿಯೊಬ್ಬರೂ ಹೊಸ ಆಲೋಚನೆ, ಹೊಸ ಅವಕಾಶಗಳ ಬಗ್ಗೆ ಆಲೋಚಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ನನಗೆ ಪರಿಚಿತರಿರುವ ತಜ್ಞರು, ವೈದ್ಯರು, ಸಲಹೆಗಾರರೊಂದಿಗೆ ಚರ್ಚೆ ಮಾಡಿ ಸರ್ಕಾರಕ್ಕೆ ಪ್ರಮುಖ ಎನಿಸುವ ಹತ್ತು ಸಲಹೆಗಳನ್ನು ಇಲ್ಲಿ ನೀಡುತ್ತಿದ್ದೇನೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂಬ ಆಶಾ ಭಾವ ನನ್ನದು ಎಂದು ಹೇಳಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ ಹತ್ತು ಸಲಹೆಗಳು..
1. ಫೀವರ್ ಕ್ಲಿನಿಕ್ಗಳು
ಪ್ರತಿ ವಾರ್ಡ್, ಗ್ರಾಮ ಪಂಚಾಯತ್ ಮಟ್ಟದಲ್ಲಿ 3-4 ಫೀವರ್ ಕ್ಲಿನಿಕ್ಗಳನ್ನು ಆರಂಭಿಸಬೇಕು. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುವವರಿಂದ ಆಸ್ಪತ್ರೆಗಳ ಮೇಲೆ ಬೀಳುತ್ತಿರುವ ಒತ್ತಡವನ್ನು ಈ ಮೂಲಕ ನಿಯಂತ್ರಿಸಬಹುದು. ಮತ್ತು ಸೋಂಕಿತರನ್ನು ಪತ್ತೆಹಚ್ಚಲೂ ಈ ಫೀವರ್ ಕ್ಲಿನಿಕ್ಗಳು ನೆರವಾಗಬಲ್ಲವು.
2. ಸಿಬ್ಬಂದಿ ನಿಯೋಜನೆ
ವೈದ್ಯಕೀಯೇತರ ಬೋಧನಾ ಸಿಬ್ಬಂದಿ ಮತ್ತು 'ರಾಷ್ಟ್ರೀಯ ಹೆಲ್ತ್ ಮಿಷನ್'ನ ಸಿಬ್ಬಂದಿಯನ್ನು ಕೋವಿಡ್ ನಿಯಂತ್ರಣಾ ವ್ಯವಸ್ಥೆಗೆ ನಿಯೋಜಿಸಬೇಕು. ಸಿಬ್ಬಂದಿ ಕೊರತೆ ಅನುಭವಿಸುತ್ತಿರುವ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೆಂಟರ್ಗಳಲ್ಲಿ ಇವರ ಸೇವೆಯನ್ನು ಅಗತ್ಯವಾಗಿ ಬಳಸಿಕೊಳ್ಳಬೇಕು.
3. ಆಯುಷ್ ಕಾಲೇಜು, ಆಸ್ಪತ್ರೆಗಳ ಸೇವೆ ಬಳಕೆ
ಸೋಂಕಿನ ಲಕ್ಷಣವಿಲ್ಲದ ಅಥವಾ ಕಡಿಮೆ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ರಾಜ್ಯದ ಆಯುಷ್ ಕಾಲೇಜುಗಳು ಮತ್ತು ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು. ಅವುಗಳು ತಮ್ಮಲ್ಲಿ ಲಭ್ಯವಿರುವ ಸಿಬ್ಬಂದಿಯ ನೆರವಿನಿಂದಲೇ ಆರೋಗ್ಯ ಸೇವೆ ನೀಡಿದರೆ, ಇತರೆ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಎಲ್ಲರಿಗೂ ಆರೋಗ್ಯ ಸೇವೆ ಸಿಗುವಂತೆ ಮಾಡಬಹುದು.
4. ನಿಗಾ ಕೇಂದ್ರಗಳು
ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು, ಹೋಟೆಲ್ಗಳನ್ನು ಸೋಂಕು ಲಕ್ಷಣ ರಹಿತರ ಆರೈಕೆ ಮತ್ತು ನಿಗಾ ಕೇಂದ್ರಗಳಾಗಿ ಪರಿವರ್ತಿಸಬೇಕು. ಲಕ್ಷಣಗಳು ಕಾಣಿಸಿಕೊಂಡು, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಮಾತ್ರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ವರ್ಗಾಯಿಸಬೇಕು.
5. ಹಾಸಿಗೆ ನೀಡಬೇಕಾದ್ದನ್ನು ಯಾರು ನಿರ್ಧರಿಸಬೇಕು?
ವಾರ್ಡ್, ಗ್ರಾಮ ಪಂಚಾಯತ್ ಮಟ್ಟದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ಕ್ಲಿನಿಕ್ಗಳು ಮತ್ತು ಆರೋಗ್ಯ ಸಿಬ್ಬಂದಿ ಮಾತ್ರ ಹಾಸಿಗೆಗಾಗಿ ವಾರ್ ರೂಂಗಳಿಗೆ ಶಿಫಾರಸು ಮಾಡಬೇಕು. ಹಾಸಿಗೆ ಒದಗಿಸುವ ಅಧಿಕಾರ, ಹೊಣೆಗಾರಿಕೆಯನ್ನು ಅವರಿಗೇ ನೀಡಬೇಕು. ಹಾಸಿಗೆ ನೀಡಬೇಕೇ ಬೇಡವೇ ಎಂಬುದನ್ನು ಡೇಟಾ ಎಂಟ್ರಿ ಆಪರೇಟರ್ಗಳು ನಿರ್ಧರಿಸಬಾರದು.
6. ಆಸ್ಪತ್ರೆಗೊಬ್ಬ ಅಧಿಕಾರಿ
ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವ್ಯವಸ್ಥಾಪನೆ ಮೇಲೆ ನಿಗಾ ವಹಿಸಲು ಐಎಎಸ್ ಮತ್ತು ಕೆಎಎಸ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸ ಬೇಕು. ಅವರು ರೋಗಿಗಗಳ ಹಾಸಿಗೆ, ಔಷಧ, ಆರೈಕೆ, ಆಹಾರ ಪೂರೈಕೆ ವ್ಯವಸ್ಥೆಯನ್ನು ನಿಭಾಯಿಸಬೇಕು. ಅದರ ಜೊತೆಗೇ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರೂ ಸೇರಿದಂತೆ ಆರೋಗ್ಯ ಸಿಬ್ಬಂದಿಯ ಅಗತ್ಯಗಳನ್ನು ಪೂರೈಸಬೇಕು.
7. ಆಸ್ಪತ್ರೆ ಅಧಿಕಾರಿಯ ಹೊಣೆಗಾರಿಕೆಗಳು
ನಿರ್ದಿಷ್ಟ ಆಸ್ಪತ್ರೆಗೆ ನಿಯೋಜಿಸಲಾದ ಅಧಿಕಾರಿಯು ಪ್ರತಿನಿತ್ಯ ತನ್ನ ಜವಾಬ್ದಾರಿಯ ಆಸ್ಪತ್ರೆಗೆ ಕಡ್ಡಾಯವಾಗಿ ಭೇಟಿ ನೀಡುವಂತೆ ತಾಕೀತು ಮಾಡಬೇಕು. ರೋಗಿಗಳು ಮತ್ತು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯ ಬೇಕು ಬೇಡಗಳ ಮೇಲೆ ಅಧಿಕಾರಿಗಳು ಗಮನಹರಿಸಬೇಕು. ಸಮಸ್ಯೆ ಬಗೆಹರಿಸುವ ಅಧಿಕಾರ, ಹೊಣೆಗಾರಿಕೆ, ಸಂಪನ್ಮೂಲವನ್ನು ಸರ್ಕಾರ ನೀಡಬೇಕು.
8. ಸ್ವಯಂ ಸೇವಕರು, ಯುಕವರಿಗೆ ಕರೆ
ಕೋವಿಡ್ ವಿರುದ್ಧ ಅವಿರತವಾಗಿ ಹೋರಾಡುತ್ತಿರುವ, ನಾಗರಿಕರ ಪ್ರಾಣ ರಕ್ಷಣೆಯ ಕಾರ್ಯದಲ್ಲಿ ಸೆಣಸುತ್ತಿರುವ ಅರೋಗ್ಯ ವ್ಯವಸ್ಥೆಯ ನೆರವಿಗೆ ಬರುವಂತೆ ಯುವಕರಿಗೆ, ಸ್ವಯಂ ಸೇವಕರಿಗೆ ಸರ್ಕಾರ ಕರೆ ನೀಡಬೇಕು. ಅವರ ಸೇವೆ ಪಡೆಯುವ ಜೊತೆಗೆ, ಕೋವಿಡ್ ವಿರುದ್ಧ ಹೋರಾಟಕ್ಕೆ ಉಪಯುಕ್ತ ಎನಿಸುವ ಅವರ ಚಿಂತನೆಗಳನ್ನೂ ಸರ್ಕಾರ ಪ್ರೋತ್ಸಾಹಿಸಬೇಕು.
9. ಲಸಿಕೆ ಮತ್ತು ಜಾಗೃತಿ
ಫೀವರ್ ಕ್ಲಿನಿಕ್ಗಳ ಹಂತದಲ್ಲಿಯೂ ಲಸಿಕೆ ಲಭ್ಯವಾಗಬೇಕು ಮತ್ತು ಲಸಿಕೆಯು ಕೋವಿಡ್ ಅನ್ನು ನಿಯಂತ್ರಿಸಬಲ್ಲದು ಎಂದು ಜಾಗೃತಿ ಮೂಡಿಸುವ ಕಾರ್ಯವೂ ಇಲ್ಲಿಂದಲೇ ಆರಂಭವಾಗಬೇಕು.
10. ಅರ್ಹರು ಕಾಯಂ ಆಗಬೇಕು
ಆರೋಗ್ಯ ಇಲಾಖೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಸಿಬ್ಬಂದಿಯಲ್ಲಿ ಅರ್ಹರನ್ನು ಸರ್ಕಾರ ಕೂಡಲೇ ಕಾಯಂಗೊಳಿಸಬೇಕು.