ಚಾಮರಾಜನಗರ, ಮೇ 08 (DaijiworldNews/MB) : ''ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಜೂನ್ 21 ರಂದು ನಡೆಸಲು ನಿಶ್ಚಯಿಸಲಾಗಿದೆ. ಈಗ ಕೊರೊನಾ ಸೋಂಕಿನ ಮಧ್ಯೆ ವಿದ್ಯಾರ್ಥಿಗಳು ಯಾವುದೇ ವಿಚಲಿತರಾಗದೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ'' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಗ್ರಾಮದಲ್ಲಿ ಈ ಬಗ್ಗೆ ಮಾತನಾಡಿದ ಅವರು, ''ವಿದ್ಯಾರ್ಥಿಗಳು ತಮ್ಮ ಆರೋಗ್ಯ ಕಾಪಾಡಿಕೊಂಡು ಗೊಂದಲ, ಆತಂಕ, ಉದ್ವೇಗಕ್ಕೆ ಒಳಗಾಗದೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ. ಸದ್ಯಕ್ಕೆ ಸೋಂಕು ಹೆಚ್ಚಳದ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಲಾಗಿದೆ. ಪರೀಕ್ಷೆ ಆರಂಭಕ್ಕೆ 15-20 ದಿನಗಳು ಇರುವಾಗ ಮುಂದಿನ ದಿನವನ್ನು ಪ್ರಕಟಿಸುತ್ತೇವೆ. ಆದರೆ ಸದ್ಯ ನಿಗದಿಮಾಡಿರುವ ಪಟ್ಟಿಯಂತೆ ಹತ್ತನೇ ತರಗತಿ ಪರೀಕ್ಷೆ ಜೂನ್ 21ಕ್ಕೆ ಆರಂಭವಾಗುತ್ತದೆ. ಇದರಲ್ಲಿ ಬದಲಾವಣೆ ಇಲ್ಲ'' ಎಂದು ಸ್ಪಷ್ಟಪಡಿಸಿದರು.
ಕಳೆದ ವರ್ಷ ಕೊರೊನಾದಿಂದಾಗಿ ಮುಂದೂಡಿಕೆ ಮಾಡಲಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬಳಿಕ ಎಲ್ಲಾ ಸುರಕ್ಷತಾ ಕ್ರಮ ಕೈಗೊಂಡು ನಡೆಸಲಾಗಿತ್ತು. ಈ ವರ್ಷ ದಿನಾಂಕ ನಿಗದಿಯಾಗಿದೆ. ಹಾಗೆಯೇ ಇದರಲ್ಲಿ ಬದಲಾವಣೆ ಇಲ್ಲ ಎಂದು ಈಗಾಗಲೇ ಸಚಿವರು ಹೇಳಿದ್ದಾರೆ.