ನವದೆಹಲಿ, ಮೇ.08 (DaijiworldNews/PY): "ರಷ್ಯಾದ ಸ್ಪುಟ್ನಿಕ್ ಲೈಟ್ ಕೊರೊನಾ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎನ್ನುವ ಹೇಳಿಕೆಯನ್ನು ಭಾರತ ಪರಿಶೀಲಿಸಲಿದೆ" ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸ್ಪುಟ್ನಿಕ್ ವಿ ಎರಡು ಡೋಸ್ ಲಸಿಕೆಯಾಗಿದೆ. ಈ ಲಸಿಕೆಯನ್ನು ಮೂರು ವಾರಗಳ ಅಂತರದಲ್ಲಿ ಎರಡು ಬಾರಿ ತೆಗೆದುಕೊಳ್ಳಲಾಗುತ್ತದೆ. ಈ ಎರಡೂ ಲಸಿಕೆಗಳು ಪರಸ್ಪರ ಭಿನ್ನವಾಗಿರುವುದು ಇದರ ವಿಶಿಷ್ಟ ಲಕ್ಷಣವಾಗಿದೆ. ಇತರೆ ಲಸಿಕೆಗಳಲ್ಲಿ ಎರಡೂ ಪ್ರಮಾಣಗಳು ಒಂದೇ ಆಗಿರುತ್ತವೆ" ಎಂದಿದ್ದಾರೆ.
"ಸ್ಪುಟ್ನಿಕ್ ಲೈಟ್ ಒಂದು ವೇಳೆ ಅಭಿವೃದ್ದಿಯಾದಲ್ಲಿ ಒಂದೇ ಡೋಸ್ ಸಾಕು ಎಂದು ಹೇಳುತ್ತಿದ್ದಾರೆ. ಆದರೆ, ಈ ಕುರಿತು ನಾವು ಪರಿಶೀಲಿಸುತ್ತೇವೆ. ಡಾಟಾ ಹಾಗೂ ಇಮ್ಯುನೊಜೆನಿಸಿಟಿ ಮೂಲಕ ನಾವು ಪರಿಶೀಲನೆ ಮಾಡಿ ಬಳಿ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
"ರಷ್ಯಾದ ಹೇಳಿಕೆಯಂತೆ ಸ್ಪುಟ್ನಿಕ್ ಲೈಟ್ನ ಒಂದು ಡೋಸ್ ಸಾಕಾಗುತ್ತದೆ ಎನ್ನುವುದು ಸತ್ಯವಾದರೆ, ಭಾರತದಲ್ಲಿ ಇದರಿಂದ ಲಸಿಕೆಯ ವೇಗ ಹೆಚ್ಚಾಗುತ್ತದೆ. ಆದರೆ, ವೈಜ್ಞಾನಿಕ ಡಾಟಾ ಹಾಗೂ ಮಾಹಿತಿಯ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.