ಮುಂಬೈ, ಮೇ 08 (DaijiworldNews/MB) : ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಹಿಮಾಚಲ ಪ್ರದೇಶ ಪ್ರವಾಸಕ್ಕೂ ಮುನ್ನ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ನಟಿಯ ಕೊರೊನಾ ಸೋಂಕು ವರದಿ ಪಾಸಿಟಿವ್ ಆಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಮಾಹಿತಿ ನೀಡಿರುವ ನಟಿ, ''ಕಳೆದ ಕೆಲವು ದಿನಗಳಿಂದ ನನ್ನ ಕಣ್ಣುಗಳಲ್ಲಿ ಸ್ವಲ್ಪ ಬಿಸಿ ಅನುಭವವಾಗುತ್ತಿತ್ತು. ಹಾಗೆಯೇ ದಣಿವು ಕಾಣಿಸಿಕೊಂಡಿತ್ತು. ಹಿಮಾಚಲ ಪ್ರದೇಶಕ್ಕೆ ನಾನು ಹೋಗಲಿದ್ದ ಕಾರಣ ನಿನ್ನೆ ಕೊರೊನಾ ಪರೀಕ್ಷೆಗೆ ಒಳಪಟ್ಟೆ, ಅದರ ಫಲಿತಾಂಶ ಇಂದು ಬಂದಿದ್ದು ವರದಿ ಪಾಸಿಟಿವ್ ಆಗಿದೆ'' ಎಂದು ತಿಳಿಸಿದ್ದಾರೆ.
''ಹಾಗೆಯೇ ನಾನು ಕ್ವಾರಂಟೈನ್ಗೆ ಒಳಗಾಗಿದ್ದೇನೆ. ನನ್ನ ದೇಹದಲ್ಲಿ ಈ ವೈರಸ್ ಪಾರ್ಟಿ ಮಾಡುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಈಗ ನಾನು ಅದನ್ನು ನಾಶ ಮಾಡುತ್ತೇನೆ ಎಂದು ನನಗೆ ತಿಳಿದಿದೆ ಎಂದು ಕೂಡಾ ಹೇಳಿರುವ ಕಂಗನಾ, ಜನರು ದಯವಿಟ್ಟು ಜಾಗರೂಕರಾಗಿರಿ, ನೀವು ಭಯಪಟ್ಟರೆ, ನಿಮ್ಮನ್ನು ಅದು ಭಯಪಡಿಸುತ್ತದೆ. ಬನ್ನಿ ನಾವು ಈ ಕೊರೊನಾವನ್ನು ನಾಶ ಮಾಡೋಣ. ಇದು ಕೇವಲ ಕೆಲ ದಿನ ಬರುವ ಜ್ವರವಷ್ಟೇ, ಆದರೆ ಈಗ ಜನರಿಗೆ ತೊಂದರೆ ಕೊಡುತ್ತಿದೆ. ಹರ ಹರ ಮಹಾದೇವ'' ಎಂದಿದ್ದಾರೆ.
ಸದಾ ವಿವಾದಾತ್ಮಕ ಟ್ವೀಟ್ಗಳನ್ನು ಮಾಡುವ ಮೂಲಕ ಸುದ್ದಿಯಾಗುತ್ತಿದ್ದ ನಟಿ ಕಂಗನಾರ ಟ್ವಿಟ್ಟರ್ ಖಾತೆಯನ್ನು ಇತ್ತೀಚೆಗೆ ಟ್ವಿಟರ್ ಶಾಶ್ವತವಾಗಿ ಅಮಾನತು ಮಾಡಿದೆ.