ಬೆಂಗಳೂರು, ಮೇ.08 (DaijiworldNews/PY): ಅಕ್ರಮವಾಗಿ ದುಬಾರಿ ಬೆಲೆಗೆ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಪೀಣ್ಯದ ಸಿಗಾ ಗ್ಯಾಸಸ್ ಕಂಪೆನಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಸಿಗಾ ಗ್ಯಾಸ್ ಕಂಪೆನಿಯಯಲ್ಲಿ ಕೆಲಸ ಮಾಡುತ್ತಿದ್ದ ಬ್ರಾಂಚ್ ಇಂಚಾರ್ಜ್ ರವಿಕುಮಾರ್ (36) ಬಂಧಿತ ಆರೋಪಿ.
"ಸರ್ಕಾರ 47 ಲೀಟರ್ ಆಕ್ಸಿಜನ್ಗೆ 3,000 ರೂ. ನಿಗದಿ ಮಾಡಿದ್ದು, ರವಿಕುಮಾರ್ 6,000 ರೂ.ನಂತೆ ಮಾರಾಟ ಮಾಡುತ್ತಿದ್ದ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಿಗಾ ಗ್ಯಾಸಸ್ನಿಂದ ನಿತ್ಯ ದುಬಾರಿ ಬೆಲೆಗೆ ಆಕ್ಸಿಜನ್ ಸಿಲಿಂಡರ್ ಮಾರುತ್ತಿದ್ದರು. ಈ ಬಗ್ಗೆ ನಿಖರ ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ಮಾಡಲಾಗಿದೆ" ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
"ಆರೋಪಿಯ ವಿರುದ್ದ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದಿದ್ದಾರೆ.