ಲಕ್ನೋ, ಮೇ 08 (DaijiworldNews/MS): ದೇಶವ್ಯಾಪ್ತಿ ಕೊರೊನಾ ಮಿತಿಮೀರಿ ಹರಡುತ್ತಿರುವ ಮಧ್ಯೆ ಉತ್ತರ ಪ್ರದೇಶದಲ್ಲಿ ಗೋಶಾಲೆಗಳಲ್ಲಿ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ಯಾನರ್ಗಳನ್ನು ಅಳವಡಿಸಲಾಗಿದೆ ಎಂದು ಯುಪಿ ಸರ್ಕಾರದ ಪತ್ರಿಕಾ ಪ್ರಕಟಣೆಯೂ ತೀವ್ರ ಟೀಕೆಗೆ ಗುರಿಯಾದ ಬಳಿಕ ಸರ್ಕಾರ ಯೂಟರ್ನ್ ಹೊಡೆದಿದೆ. ಮಾತ್ರವಲ್ಲದೆ ಮಾಧ್ಯಮ ಸುದ್ದಿಗಳನ್ನುಇದೊಂದು "ದಾರಿತಪ್ಪಿಸುವ ವರದಿ" ಎಂದು ಹೇಳಿದೆ.
ಮೇ 4 ರಂದು ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ಉತ್ತರಪ್ರದೇಶದಲ್ಲಿ ಜಾನುವಾರುಗಳಿಗಾಗಿ ಅಶ್ರಯ ತಾಣ ಸ್ಥಾಪಿಸುವುದರ ಜೊತೆಗೆ, ಯೋಗಿ ಸರ್ಕಾರವು "ಹಸುಗಳು ಮತ್ತು ಇತರ ಪ್ರಾಣಿಗಳಿಗಾಗಿ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ಯಾನರ್ಗಳಂತಹ ಎಲ್ಲಾ ವೈದ್ಯಕೀಯ ಉಪಕರಣಗಳನ್ನು" ಒದಗಿಸುತ್ತಿದೆ ಎಂದು ಸ್ಪಷ್ಟವಾಗಿ ಹೇಳಿತ್ತು.
ಈ ಮಾಧ್ಯಮ ಪ್ರಕಟಣೆಯಲ್ಲಿ "ಉತ್ತರಪ್ರದೇಶದಲ್ಲಿ ಕೊವೀಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗೋವುಗಳ ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮವಾಗಿದೆ " ಎಂದು ತಿಳಿಸಿತ್ತು.
ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ, ಸರ್ಕಾರದ ಉನ್ನತ ಅಧಿಕಾರಿಗಳು, " ಆಕ್ಸಿಮೀಟರ್ , ಥರ್ಮಲ್ ಸ್ಕ್ಯಾನರ್ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಗೋಶಾಲೆಗಳಲ್ಲಿನ ಸಿಬ್ಬಂದಿಗಳಿಗೆ ಕಳುಹಿಸಲಾಗುತ್ತಿದೆಯೇ ಹೊರತು ಹಸುಗಳಿಗೆ ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್, "ಹಸುಗಳಿಗಾಗಿ ಆಕ್ಸಿಮೀಟರ್ ಅಥವಾ ಥರ್ಮಲ್ ಸ್ಕ್ಯಾನರ್ಗಳನ್ನು ಬಳಸುವ ಯಾವುದೇ ಆದೇಶವನ್ನು ಯುಪಿ ಸರ್ಕಾರ ನೀಡಿಲ್ಲ ಎಂದು ಹೇಳಿದ್ದಾರೆ.
ಇದೊಂದು "ದಾರಿತಪ್ಪಿಸುವ" ವರದಿಯಾಗಿದೆ ಎಂದು ಕರೆದ ಅವರು, ಆಕ್ಸಿಮೀಟರ್ ಮತ್ತು ಇತರ ಉಪಕರಣಗಳನ್ನು ಆಶ್ರಯದಲ್ಲಿರುವ ಸಿಬ್ಬಂದಿಗಾಗಿ ಅಳವಡಿಸಲಾಗುವುದು , ಹಸುಗಳಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.