ನವದೆಹಲಿ, ಮೇ 08 (DaijiworldNews/MB) : ಕೊರೊನಾ ಹೋರಾಟದಲ್ಲಿ ವ್ಯವಸ್ಥೆ ವೈಫಲ್ಯ ಅನುಭವಿಸಿಲ್ಲ. ಮೋದಿ ಸರ್ಕಾರ ಜನತೆಯನ್ನು ವೈಫಲ್ಯಕ್ಕೆ ದೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ವಿಡಿಯೋ ಕಾನ್ಛರೆನ್ಸ್ ಮೂಲಕ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ, ''ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಸರ್ಕಾರ ಕೂಡಲೇ ಕೊರೊನಾ ಬಗ್ಗೆ ಚರ್ಚೆಗೆ ತಕ್ಷಣ ಸರ್ವಪಕ್ಷ ಸಭೆ ಕರೆಯಬೇಕು. ನಾವೆಲ್ಲರೂ ಒಂದು ರಾಷ್ಟ್ರವಾಗಿ ಕೊರೊನಾ ವಿರುದ್ದ ಹೋರಾಡಬೇಕು. ಆ ನಿಟ್ಟಿನಲ್ಲಿ ಕೊರೊನಾ ನಿರ್ವಹಣೆಯ ಬಗ್ಗೆ ಸರ್ವಪಕ್ಷ ಸಭೆ ಕರೆಯಬೇಕು'' ಎಂದು ಆಗ್ರಹಿಸಿದರು.
''ಮೋದಿ ಸರ್ಕಾರವು ಭಾರತದ ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಭಾರತವು ಜನರ ಬಗ್ಗೆ ಸಹಾನುಭೂತಿ ಇಲ್ಲದ ರಾಜಕೀಯ ನಾಯಕತ್ವದಿಂದ ಬಳಲುತ್ತಿದೆ. ಭಾರತದ ಸದ್ಯದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಮರ್ಥ, ಶಾಂತ ಹಾಗೂ ದೂರದೃಷ್ಟಿಯ ನಾಯಕತ್ವದ ಅಗತ್ಯವಿದೆ. ಪ್ರಸ್ತುತ ದೇಶವು ಮೋದಿ ಸರ್ಕಾರದ ಅಸಮರ್ಥತೆಯಿಂದ ಬಳಲಿಹೋಗಿದೆ'' ಎಂದು ಸರ್ಕಾರವನ್ನು ಟೀಕಿಸಿದರು.
ಇನ್ನು ''ಸರ್ಕಾರದ ಕೊರೊನಾ ಅಭಿಯಾನವೂ ಕೂಡಾ ಅಸಮಾನತೆಯಿಂದ ಕೂಡಿದೆ. ಈ ಲಸಿಕಾ ಅಭಿಯಾನದಿಂದ ಆದಿವಾಸಿಗಳು, ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳ ಜನರು, ಬಡವರನ್ನು ದೂಡವಿಡಲಾಗಿದೆ'' ಎಂದು ಗಂಭೀರ ಆರೋಪ ಮಾಡಿದರು.
''ಈ ಸಂದರ್ಭ ಕೊರೊನಾ ವಿರುದ್ದ ನಾವು ಜೊತೆಯಾಗಿ ಹೋರಾಡಬೇಕು. ಸರ್ಕಾರ ಹಾಗೂ ನಮ್ಮ ನಡುವಿನ ತಿಕ್ಕಾಟದ ಪರಿಸ್ಥಿತಿ ಉಂಟಾಗಬಾರದು. ರಾಜಕೀಯವಾಗಿರುವ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಕೊರೊನಾ ಮೀರಿಸಿದೆ. ಪ್ರಸ್ತುತ ನಮ್ಮ ಹಾಗೂ ಕೊರೊನಾ ನಡುವಿನ ಯುದ್ದ'' ಎಂದು ಹೇಳಿದರು.