ಲಕ್ನೋ, ಮೇ.08 (DaijiworldNews/PY): ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣವಾಗುತ್ತಿದೆ. ಈ ನಡುವೆ ಉತ್ತರಪ್ರದೇಶದ ಬಿಜೆಪಿ ಶಾಸಕರೋರ್ವರು ಕೊರೊನಾ ಸೋಂಕು ನಿಯಂತ್ರಣಕ್ಕೆ ಗೋಮೂತ್ರ ಕುಡಿಯುವಂತೆ ಕರೆ ನೀಡಿದ್ದು, ಜನರ ಎದುರೇ ಗೋಮೂತ್ರ ಕುಡಿದ ವಿಡಿಯೋ ವೈರಲ್ ಆಗಿದೆ.
ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ಬೈರಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್ ಅವರು, ಹೇಗೆ ಗೋಮೂತ್ರವನ್ನು ನಿಖರವಾಗಿ ತೆಗೆದುಕೊಳ್ಳಬೇಕು ಎಂದು ಪ್ರದರ್ಶಿಸಿದ್ದಾರೆ. "ನಾನೂ ಕೂಡಾ ಗೋಮೂತ್ರ ಕುಡಿದಿದ್ದು, ಆರೋಗ್ಯವಾಗಿದ್ದೇನೆ. ಜನರಿಗಾಗಿ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡಿದರೂ, ನನ್ನ ಆರೋಗ್ಯದ ರಹಸ್ಯವೆಂದರೆ ಗೋಮೂತ್ರ" ಎಂದು ತಿಳಿಸಿದ್ದಾರೆ.
"ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಬೇಕು. 2-3 ಮುಚ್ಚಳ ಗೋಮೂತ್ರ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಬೇಕು. ಗೋಮೂತ್ರ ಕುಡಿದ ಬಳಿಕ ಒಂದು ಮುನ್ನೆಚ್ಚರಿಕೆ ವಹಿಸಬೇಕು" ಎಂದಿದ್ದಾರೆ.
"ಗೋಮೂತ್ರ ಕುಡಿದ ಅರ್ಧ ಗಂಟೆಯ ಬಳಿಕ ಏನನ್ನೂ ಸೇವಿಸಬೇಡಿ. ಇದು ಕೊರೊನಾಕ್ಕೆ ಮಾತ್ರವಲ್ಲದೇ ಅನೇಕ ರೋಗಗಳ ವಿರುದ್ದ ಸೂಪರ್ ಪವರ್" ಎಂದು ಹೇಳಿದ್ದಾರೆ.