ಮೈಸೂರು, ಮೇ 08 (DaijiworldNews/MB) : ಸರ್ಕಾರದ ಖಜಾನೆಯಿಂದ ಮಠ ಮಾನ್ಯಗಳಿಗೆ ಹಣ ನೀಡಲಾಗಿದೆ. ಈಗ ಈ ಕೊರೊನಾ ಸಂಕಷ್ಟದಲ್ಲಿ ಹಣ ವಾಪಾಸ್ ಕೇಳಿ, ಅದನ್ನು ಕೊರೊನಾ ಸಂಕಷ್ಟದ ಪರಿಹಾರಕ್ಕಾಗಿ ಬಳಸಿಕೊಳ್ಳಿ ಎಂದು ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ''ಈ ಕೊರೊನಾ ಸಂಕಷ್ಟದ ಸಂದರ್ಭ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮಠ ಮಾನ್ಯಗಳಿಂದ ಹಣ ವಾಪಾಸ್ ಕೇಳಿ'' ಎಂದು ಹೇಳಿದ ಅವರು, ''ಈ ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಮಠ ಮಾನ್ಯಗಳು ಮುಂದೆ ಬರಬೇಕು. ತೀರಾ ಸಂಕಷ್ಟದಲ್ಲಿರುವ ಜನರಿಗೆ ಊಟ, ಔಷಧಿ ಮೊದಲಾದವುಗಳಿಗೆ ಸಹಾಯ ಮಾಡಬೇಕು'' ಎಂದು ಮನವಿ ಮಾಡಿದರು.
ಇನ್ನು ಈ ಸಂದರ್ಭ ಬೆಡ್ ಬ್ಲಾಕಿಂಗ್ ಬಗ್ಗೆ ಮಾತನಾಡಿದ ಅವರು, ''ಓರ್ವ ಸಂಸದ ಹಗರಣವನ್ನು ಬಯಲು ಮಾಡಬೇಕಾದ ಸ್ಥಿತಿ ಬಂದಿದೆಯೇ? ಸರ್ಕಾರಕ್ಕೆ ಯಾವ ಮಾನ ಮರ್ಯಾದೆಯೂ ಇಲ್ಲವೇ? ಸರ್ಕಾರ ಏನು ಮಾಡುತ್ತಿದೆ?'' ಎಂದು ತನ್ನದೇ ಪಕ್ಷದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
''ಈ ಹಗರಣ ಬಯಳಿಗೆಳೆದ ಸಂಸದ ತೇಜಸ್ವಿ ಸೂರ್ಯರನ್ನು ಅಭಿನಂದಿಸಬೇಕು. ಆದರೆ ಇದಕ್ಕೆ ಈಗ ಕೋಮು ಬಣ್ಣ ಹಚ್ಚುವ ಯತ್ನ ಮಾಡಲಾಗುತ್ತಿದೆ. ಈ ಕೆಲಸ ಮಾತ್ರ ಮಾಡಬಾರದು. ತೇಜಸ್ವಿ ಬಗ್ಗೆಯೂ ಹಗುರವಾಗಿ ಮಾತನಾಡಬಾರದು'' ಎಂದು ಹೇಳಿದರು.
ಇನ್ನು ''ಚಾಮರಾಜನಗರ, ಮೈಸೂರ ಜಿಲ್ಲಾಧಿಕಾರಿಗಳು ಪರಸ್ಪರ ವಾಕ್ಸಮರ ನಡೆಸುತ್ತಿದ್ದಾರೆ. ಆದರೆ ಕರ್ನಾಟಕದ ಆಡಳಿತದವರಿಗೆ ಗರ ಬಡಿದಂತಿದೆ'' ಎಂದು ಹೇಳಿದ ಅವರು, ''ಮೈಸೂರು ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಎಸ್ ಟಿ ಸೋಮಶೇಖರ್ ಅವರು ತಾವಾಗಿಯೇ ಆಸ್ಪತ್ರೆಗೆ ಹೋಗಿ ಪರಿಸ್ಥಿತಿ ಅವಲೋಕಿಸಬೇಕು, ಬರೀ ಅಧಿಕಾರಿಗಳ ಮಾತು ಕೇಳಬೇಡಿ'' ಎಂದು ಹೇಳಿದ್ದಾರೆ.