ನವದೆಹಲಿ, ಮೇ.08 (DaijiworldNews/PY): "ಎಲ್ಲರಿಗೂ ಮುಂದಿನ ಮೂರು ತಿಂಗಳಲ್ಲಿ ಕೊರೊನಾ ವ್ಯಾಕ್ಸಿನ್ ನೀಡಲಾಗುವುದು" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಉಚಿತವಾಗಿ ಕೊರೊನಾ ವ್ಯಾಕ್ಸಿನ್ ನೀಡಲಾಗುವುದು. ಅವರ ಕಚೇರಿಗಳಲ್ಲೇ ವ್ಯಾಕ್ಸಿನೇಷನ್ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
ಆಕ್ಸಿಜನ್ ಕುರಿತು ಮಾತನಾಡಿದ ಅವರು, "ಇದೀಗ ದೆಹಲಿಯಲ್ಲಿ ಆಕ್ಸಿಜನ್ನ ಸಮಸ್ಯೆ ಇಲ್ಲ. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಕೊರೊನಾ ಸಮಸ್ಯೆ ಹೆಚ್ಚಾಗಿ, ಆಕ್ಸಿಜನ್ ಸಮಸ್ಯೆಯಾಗಿತ್ತು. ಈಗ ಕೇಂದ್ರ ಸರ್ಕಾರ ಸಮರ್ಪಕವಾಗಿ ಆಕ್ಸಿಜನ್ ಪೂರೈಕೆ ಮಾಡಿರುವುದರಿಂದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗಿದೆ" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿದ್ದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗಿದೆ. ರೋಗಿಗಳಿಗೆ ಆಕ್ಸಿಜನ್ ಸಮಸ್ಯೆಯಿಂದ ತೊಂದರೆಗೊಳಗಾಗಬಾರದು ಎಂದು ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದಿದ್ದಾರೆ.