ಬೆಂಗಳೂರು, ಮೇ 08 (DaijiworldNews/MS): ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮೇ.10ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಆದರೆ ಹೊಸ ನಿಯಮಗಳು ಜಾರಿಯಾಗಲಿವೆ ಎಂದುಕೊಳ್ಳುವುದೇನೂ ಬೇಡ. ಏಕೆಂದರೆ ಹಳೆಯ ಲಾಕ್ ಡೌನ್ ಮಾರ್ಗಸೂಚಿಯನ್ನೇ ಕೊಂಚ ಅದಲು ಬದಲು ಮಾಡಿ ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಪೂರ್ಣ ಲಾಕ್ ಡೌನ್ ಸುದ್ದಿ ಹರಿದಾಡುತ್ತಿತ್ತು. ಆದರೆ ಸಿಎಂ ಶುಕ್ರವಾರ ಸಂಜೆ ಪತ್ರಿಕಾಗೋಷ್ಟಿ ನಡೆಸಿ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ ಎಂದರು. ಆದರೆ ಬಳಿಕ ಬಿಡುಗಡೆಯಾದ ಮಾರ್ಗಸೂಚಿಯಲ್ಲಿ ಹಳೆಯ ನಿಯಮಗಳೇ ಮುಂದುವರಿಸಿದಂತೆ ಕಾಣಿಸಿದವು. ಕೆಲವೇ ಬದಲಾವಣೆ ಹೊರತುಪಡಿಸಿದರೆ, ಉಳಿದ ನಿಯಮಗಳು ಮಾತ್ರ ಹಿಂದಿನದೇ ಇರಲಿದೆ .
ಹೀಗಾಗಿ ರಾಜ್ಯ ಸರ್ಕಾರದ ಲಾಕ್ ಡೌನ್ ಘೋಷಣೆ ಕುರಿತಂತೆ ರಾಜ್ಯ ಕಾಂಗ್ರೆಸ್ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಜನತಾ ಕರ್ಫ್ಯು ಹೆಸರನ್ನು 'ಲಾಕ್ಡೌನ್' ಎಂದು ಬದಲಿಸಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪನವರೇ ಸೋಂಕಿನಿಂದ ಚೇತರಿಕೆಗೆ ಲಾಕ್ಡೌನ್ ಘೋಷಿಸಿದ್ದೀರಿ ಆದರೆ ಆರ್ಥಿಕ ಚೇತರಿಕೆಗೆ ಯಾವ ಕ್ರಮ ಕೈಗೊಂಡಿದ್ದೀರಿ? ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಜನತೆಯ ನೆರವಿಗೆ ಯಾವ ಕಾರ್ಯಸೂಚಿಯನ್ನು ಹೊಂದಿದ್ದೀರಿ? ವೈದ್ಯಕೀಯ ವ್ಯವಸ್ಥೆ ಗಟ್ಟಿಗೊಳಿಸಲು ನಿಮ್ಮ ಕ್ರಮಗಳೇನು? ಎಂದು ಪ್ರಶ್ನಿಸಿದೆ.